ನವದೆಹಲಿ:ಸುಪ್ರೀಂಕೋರ್ಟ್ ರಾಜ್ಯದ 17 ಅನರ್ಹ ಶಾಸಕರ ಅರ್ಜಿಯ ವಿಚಾರಣೆಯನ್ನು ಇಂದು ಬೆಳಗ್ಗೆ ಕೈಗೆತಿಕೊಂಡು ಸುದೀರ್ಘ ವಿಚಾರಣೆ ನಡೆಸಿದ ಬಳಿಕ ನ್ಯಾಯಪೀಠ ವಿಚಾರಣೆಯನ್ನು ಮತ್ತೆ ನಾಳೆಗೆ ಮುಂದೂಡಿದೆ. ಹೀಗಾಗಿ ಗುರುವಾರ ಅನರ್ಹ ಶಾಸಕರ ಭವಿಷ್ಯ ನಿರ್ಧಾರವಾಗಲಿದೆ.
ಬೆಳಗ್ಗೆ 11 ಗಂಟೆಯಿಂದ ಆರಂಭವಾದ ವಿಚಾರಣೆಯು ಕಾಂಗ್ರೆಸ್, ಸ್ಪೀಕರ್ ಮತ್ತು ಅನರ್ಹ ಶಾಸಕರುಗಳ ಪರ ಇದ್ದ ವಕೀಲರ ವಾದ- ಪ್ರತಿವಾದ ಮ್ಯಾರಥಾನ್ ಮಾದರಿಯಲ್ಲಿ ಸಾಗಿತ್ತು.
ಬೆಳಗ್ಗೆ 11 ಗಂಟೆಗೆ ವಿಚಾರಣೆ ನ್ಯಾಯಪೀಠ ವಿಚಾರಣೆ ಆರಂಭಿಸಿತು. ಅನರ್ಹ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ತಮ್ಮ ವಾದವನ್ನು ಇಂದೂ ಕೂಡಾ ಮುಂದುವರೆಸಿದರು. ಚುನಾಯಿತ ಪ್ರತಿನಿಧಿಗಳನ್ನು ಹಲವು ನಿಯಮಗಳಡಿ ಅನರ್ಹಗೊಳಿಸಲು ಕಾರಣಗಳಿವೆ. ರಾಜೀನಾಮೆ ನೀಡುವಾಗ ಶಾಸಕರು ಪೂರ್ವಾಪರ ಯೋಚಿಸಿ ನಿರ್ಧಾರ ತೆಗೆದುಕೊಂಡು ರಾಜೀನಾಮೆ ಸಲ್ಲಿಸಿರುತ್ತಾರೆ. ಬೇರೆ ಕಾರಣ ನೀಡಿ ರಾಜೀನಾಮೆ ತಿರಸ್ಕರಿಸಿ ಅನರ್ಹಗೊಳಿಸುವುದು ಸರಿಯಲ್ಲ. ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿರುವುದು ಕೂಡ ಸರಿಯಲ್ಲ. ಕೂಡಲೇ ಚುನಾವಣೆ ಪ್ರಕ್ರಿಯೆಯನ್ನು 2-3 ತಿಂಗಳು ಮುಂದೂಡಬೇಕು. ಇಲ್ಲವೇ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ವಿಧಾನಸಭೆ ಕಲಾಪಗಳ ಹಿತ ಕಾಯಬೇಕಿದ್ದ ಸ್ಪೀಕರ್ ರಾಜಕೀಯ ಪಕ್ಷಗಳ ಪರ ನಿಲುವು ತಳೆಯಬಾರದು. ಸರ್ಕಾರ ಪತನಗೊಳ್ಳಲಿ ಬಿಡಲಿ ಆ ವಿಚಾರ ಅವರಿಗೆ ಸಂಬಂಧಿಸಿದ್ದಲ್ಲ. ಸುಪ್ರೀಂಕೋರ್ಟ್ ಸೂಚಿಸಿದರೂ ಸ್ಪೀಕರ್ ಸರಿಯಾದ ವಿಚಾರಣೆ ನಡೆಸದೇ ತೀರ್ಪು ಪ್ರಕಟಿಸಿದ್ದಾರೆ.
ಪಕ್ಷವನ್ನು ತ್ಯಜಿಸಿದರೇ ಅಥವಾ ಪಕ್ಷಕ್ಕೆ ಹಾನಿಯಾಗುವಂತಹ ಚಟುವಟಿಕೆ ನಡೆಸಿದರೆ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ. ಅದರಡಿ ನಿರ್ಧಾರ ಕೈಗೊಳ್ಳಬಹುದು. ಆದರೆ, ಸ್ಪೀಕರ್ ಈ ಯಾವ ಚಟುವಟಿಕೆಗಳು ಇಲ್ಲದೆಯೇ ಅವರನ್ನು ಅನರ್ಹಗೊಳಿಸಿದ್ದಾರೆ ಎಂದು ಅನರ್ಹ ಶಾಸಕ ಸುಧಾಕರ್ ಪರ ವಕೀಲ ಸುಂದರಂ ವಾದ ಮಂಡಿಸಿದರು.