ಹೈದರಾಬಾದ್:ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಈ ಮಧ್ಯೆ ಕರ್ನಾಟಕದಲ್ಲಿ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ದೇಶದ ಎಲ್ಲ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಕಳೆದ ಐದು ತಿಂಗಳಲ್ಲಿ ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಆರಂಭದಲ್ಲಿ ಅಂದರೆ ಮಾರ್ಚ್ ತಿಂಗಳಲ್ಲಿ ಪ್ರತಿದಿನ ಕೇವಲ 2,309 ಟೆಸ್ಟ್ ನಡೆಸಲಾಗುತ್ತಿತ್ತು. ಆದರೀಗ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಏಪ್ರಿಲ್ ತಿಂಗಳಲ್ಲಿ 55,021, ಮೇನಲ್ಲಿ 2.4 ಲಕ್ಷ, ಜೂನ್ 3.2 ಲಕ್ಷ, ಜುಲೈನಲ್ಲಿ 7.6 ಲಕ್ಷ ಟೆಸ್ಟ್ ನಡೆಸಲಾಗಿದ್ದು, ಆಗಸ್ಟ್ 16ರವರೆಗೆ 6.8 ಲಕ್ಷ ಪರೀಕ್ಷೆ ನಡೆದಿದೆ.
ರಾಜ್ಯದಲ್ಲಿ ಇದೀಗ ಪ್ರತಿದಿನ 55 ಸಾವಿರಕ್ಕೂ ಅಧಿಕ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, 101ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಿವೆ.
ಆರಂಭದಲ್ಲಿ 1 ಲಕ್ಷ ಕೊರೊನಾ ಟೆಸ್ಟ್ ನಡೆಸಲು ರಾಜ್ಯ ಸರ್ಕಾರ ಬರೋಬ್ಬರಿ 99 ದಿನ ತೆಗೆದುಕೊಂಡಿದೆ. ಅಂದರೆ ಫೆಬ್ರವರಿಯಿಂದ ಮೇ ತಿಂಗಳವರೆಗೆ ಕೇವಲ 1 ಲಕ್ಷ ಟೆಸ್ಟ್ ನಡೆಸಲಾಗಿತ್ತು. ಈಗ ಇದರಲ್ಲಿ ಗಣನೀಯ ಮಟ್ಟದಲ್ಲಿ ಏರಿಕೆಯಾಗಿದೆ.
ಬೆಂಗಳೂರಿನಲ್ಲಿರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬರೋಬ್ಬರಿ 1.05 ಲಕ್ಷ ಟೆಸ್ಟ್ ನಡೆಸಲಾಗಿದ್ದು, ಉಳಿದಂತೆ ಕಲಬುರಗಿ ಗಿಮ್ಸ್ (88,323), ಬೆಂಗಳೂರಿನ ನಿಮಾನ್ಸ್ನಲ್ಲಿ (81.816) ಕೊರೊನಾ ಪರೀಕ್ಷೆ ನಡೆಸಲಾಗಿದೆ.
ಖಾಸಗಿ ಲ್ಯಾಬೋರೇಟರಿಗಳಲ್ಲೂ ಹೆಚ್ಚಿನ ಟೆಸ್ಟ್ ನಡೆಸಲಾಗುತ್ತಿದೆ. ಸದ್ಯ ರಾಜ್ಯದ ಎಲ್ಲ ಖಾಸಗಿ ಲ್ಯಾಬ್ಗಳಲ್ಲಿ ಆಗಸ್ಟ್ 16ರವರೆಗೆ 4.5 ಲಕ್ಷ ಪರೀಕ್ಷೆ ನಡೆಸಲಾಗಿದೆ. ಮಂಗಳವಾರದ (ಆಗಸ್ಟ್18) ವೇಳೆಗೆ ರಾಜ್ಯದಲ್ಲಿ 21.3 ಲಕ್ಷ ಕೊರೊನಾ ಟೆಸ್ಟ್ ನಡೆಸಲಾಗಿದ್ದು, ಇದರಲ್ಲಿ 5.5 ಲಕ್ಷ ರ್ಯಾಪಿಡ್ ಟೆಸ್ಟ್, 15.8 ಲಕ್ಷ ಆರ್ಟಿ-ಪಿಸಿಆರ್ ಮೂಲಕ ನಡೆಸಲಾಗಿದೆ.
ಪ್ರತಿದಿನ ಕೊರೊನಾ ಪರೀಕ್ಷೆ ಏರುಗತಿಯಲ್ಲಿ ಸಾಗಿದ ಕಾರಣ ಸೋಂಕಿತ ಪ್ರಕರಣಗಳು ಕೂಡಾ ಹೆಚ್ಚುತ್ತಿವೆ. ಸದ್ಯ ರಾಜ್ಯದಲ್ಲಿ 79,798 ಸಕ್ರಿಯ ಪ್ರಕರಣಗಳಿವೆ.