ನವದೆಹಲಿ:ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ನಾಯಕತ್ವ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಇದರಲ್ಲಿ ಇಬ್ಬರ ಮೇಲೆ ಇನ್ನೊಬ್ಬರು ಆರೋಪ - ಪ್ರತ್ಯಾರೋಪ ಮಾಡುತ್ತಿರುವುದು ಕಂಡು ಬಂದಿದೆ.
ಕಾಂಗ್ರೆಸ್ನ ಹಿರಿಯ ಮುಖಂಡ ಕಪಿಲ್ ಸಿಬಲ್ ಸೇರಿದಂತೆ 23 ಮುಖಂಡರು ಪಕ್ಷದಲ್ಲಿ ಪೂರ್ಣಾವಧಿ, ದಕ್ಷ ಹಾಗೂ ಪರಿಣಾಮಕಾರಿ ನಾಯಕತ್ವದ ಅಗತ್ಯವಿದೆ ಎಂದು ಉಲ್ಲೇಖಿಸಿ ಸೋನಿಯಾ ಗಾಂಧಿ ಅವರಿಗೆ ಎರಡು ದಿನಗಳ ಹಿಂದೆ ಪತ್ರ ಬರೆದಿದ್ದರು. ಅದೇ ವಿಚಾರವಾಗಿ ರಾಹುಲ್ ಗಾಂಧಿ ಸಿಡಬ್ಲೂಸಿ ಸಭೆಯಲ್ಲಿ ಕೆಲ ಹಿರಿಯ ಮುಖಂಡರ ಮೇಲೆ ವಾಗ್ದಾಳಿ ನಡೆಸಿದ್ದರು.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಕೆಲ ನಾಯಕರು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಚರ್ಚೆ ಮಾಡಬಹುದಾಗಿತ್ತು. ಆದರೆ ಬಹಿರಂಗವಾಗಿ ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ ಎಂದಿದ್ದರು.
ಇದರಿಂದ ಕುಪಿತಗೊಂಡಿದ್ದ ಸಿಬಲ್, ನಾವು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ರಾಜಸ್ಥಾನ ಹೈಕೋರ್ಟ್ನಲ್ಲಿ ಕಾಂಗ್ರೆಸ್ ಪಕ್ಷ ಸಮರ್ಥಿಸಿಕೊಂಡಿದ್ದು ಹಾಗೂ ಮಣಿಪುರದಲ್ಲಿ ಬಿಜೆಪಿ ಸೋಲಿಸಿ ನಮ್ಮ ಪಕ್ಷ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ 30 ವರ್ಷಗಳಿಂದ ನಾನು ಯಾವುದೇ ವಿಚಾರದಲ್ಲೂ ಬಿಜೆಪಿ ಪರವಾದ ಹೇಳಿಕೆ ನೀಡಿಲ್ಲ. ಆದರೂ ನಾವು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಟ್ವೀಟ್ ಮಾಡಿದ್ದರು.