ಕಾನ್ಪುರ (ಉತ್ತರ ಪ್ರದೇಶ): ಕಾನ್ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಎಂಟು ಪೊಲೀಸರು ಸಾವನ್ನಪ್ಪಿದ ಬಗ್ಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಪ್ರತಿಪಕ್ಷಗಳು ಇಂದು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಯಾರೂ ಸುರಕ್ಷಿತವಾಗಿಲ್ಲ ಎಂದು ಕಿಡಿಕಾರಿವೆ.
ಇತ್ತೀಚೆಗೆ ಕಾನ್ಪುರದಲ್ಲಿ ವಿಕಾಸ್ ದುಬೆ ಎಂಬ ಅಪರಾಧಿಯನ್ನು ಸೆರೆ ಹಿಡಿಯಲು ಹೋದ ವೇಳೆ ಎನ್ಕೌಂಟರ್ ನಡೆದಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಂಟು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದರು.
ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಉತ್ತರ ಪ್ರದೇಶದ ಸಾಮಾನ್ಯ ಜನರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಉತ್ತರಪ್ರದೇಶ ಗೂಂಡಾಗಿರಿಯ ರಾಜ್ಯ ಎನ್ನುವುದಕ್ಕೆ ಮತ್ತೊಂದು ಪುರಾವೆ ಇದಾಗಿದೆ. ಪೊಲೀಸರು ಸುರಕ್ಷಿತವಾಗಿರದಿದ್ದಾಗ, ಸಾರ್ವಜನಿಕರು ಹೇಗೆ ಸುರಕ್ಷಿತರು? ಎಂದು ಪ್ರಶ್ನಿಸಿದ್ದಾರೆ.
ಇನ್ನು ಮೃತ ಪೊಲೀಸ್ ಸಿಬ್ಬಂದಿ ಕುಟುಂಬಗಳಿಗೆ ಸಂತಾಪ ಸೂಚಿಸಿದ ರಾಗಾ, ಗಾಯಗೊಂಡ ಪೊಲೀಸರು ಅತೀ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಈ ಘಟನೆಯ ನಂತರ ರಾಜ್ಯದಲ್ಲಿನ ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿವೆ. ಅದಲ್ಲದೆ, ಈ ಘಟನೆಯಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಧೈರ್ಯವನ್ನು ಮೆಚ್ಚುವಂಥದ್ದಾಗಿದೆ ಎಂದು ಶ್ಲಾಘಿಸಿದ್ದಾರೆ. ಇನ್ನು ಯೋಗಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಪೊಲೀಸರನ್ನು ಕೊಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಪಕ್ಷಗಳು ಒತ್ತಾಯಿಸಿವೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸಹ ಟ್ವೀಟ್ ಮಾಡಿದ್ದು, ಎಂಟು ಮಂದಿ ಪೊಲೀಸರು ಅಪರಾಧಿಯನ್ನು ಹಿಡಿಯಲು ಹೋದಾಗ ಹುತಾತ್ಮರಾಗಿದ್ದಾರೆ. ಹುತಾತ್ಮರ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಹದಗೆಟ್ಟಿದೆ. ಅಪರಾಧಿಗಳಿಗೆ ಯಾವುದೇ ಭಯವಿಲ್ಲ. ಸಾಮಾನ್ಯ ಮನುಷ್ಯರಿಂದ ಪೊಲೀಸರವರೆಗೆ ಯಾರೂ ಸುರಕ್ಷಿತವಾಗಿಲ್ಲ ಎಂದು ಯೋಗಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಮುಖ್ಯಮಂತ್ರಿಯ ಹೆಗಲ ಮೇಲಿದೆ. ಉತ್ತರ ಪ್ರದೇಶದ ಸಿಎಂ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕೈಗೊಂಡ ಕ್ರಮದಲ್ಲಿ ಯಾವುದೇ ಸಡಿಲತೆ ಇರಬಾರದು ಎಂದು ಪ್ರಿಯಾಂಕಾ ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶವು ಹತ್ಯಾ ಪ್ರದೇಶ (ಕೊಲೆಯ ರಾಜ್ಯ) ಆಗಿ ಮಾರ್ಪಟ್ಟಿದೆ ಎಂದು ಸಮಾಜವಾದಿ ಪಕ್ಷ ಕಿಡಿಕಾರಿದೆ. ಇದು ಯೋಗಿ ಸರ್ಕಾರವಲ್ಲ, ರೋಗಿ ಸರ್ಕಾರ. ಕಾನ್ಪುರದಲ್ಲಿ ಅಧಿಕಾರದಲ್ಲಿದ್ದವರು ಪ್ರೋತ್ಸಾಹಿಸಿದ ಅಪರಾಧಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಎಂಟು ಜನ ಪೊಲೀಸರ ಸಾವಿಗೆ ಸರ್ಕಾರವೇ ಹೊಣೆ ಎಂದು ಸಮಾಜವಾದಿ ಪಕ್ಷ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಈ ಘಟನೆಯನ್ನು ದುರದೃಷ್ಟಕರ ಎಂದಿದ್ದು, ಈ ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಂಡ ಪೊಲೀಸರಿಗೆ ನಾನು ಗೌರವ ಸಲ್ಲಿಸುತ್ತೇನೆ. ಯೋಗಿ ಸರ್ಕಾರಕ್ಕೆ ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಅಪರಾಧಿಗಳು ಮತ್ತು ಅಧಿಕಾರದಲ್ಲಿರುವವರ ಸಂಬಂಧಕ್ಕೆ ಕರ್ತವ್ಯನಿರತ ಪೊಲೀಸರು ತಮ್ಮ ಪ್ರಾಣ ನೀಡಬೇಕಾಯಿತು ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರು ಎಂಟು ಪೊಲೀಸ್ ಸಿಬ್ಬಂದಿಯನ್ನು ಹತ್ಯೆಗೈದ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ವಿಕಾಸ್ ದುಬೆ ಓರ್ವ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಇಷ್ಟು ಕ್ರಿಮಿನಲ್ ಪ್ರಕರಣಗಳು ಇದ್ದರೂ ಸಹ ಜೈಲಿನಿಂದ ಏಕೆ ಹೊರಬಂದಿದ್ದ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಇನ್ನು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಕೂಡ ಈ ಘಟನೆ ಬಗ್ಗೆ ಟ್ವೀಟ್ ಮಾಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಅವಮಾನಕರ ಸಂಗತಿಯಾಗಿದ್ದು, ಇದು ರಾಜ್ಯಕ್ಕೆ ದುರದೃಷ್ಟಕರ ಎಂದು ಬರೆದಿದ್ದಾರೆ. ಯುಪಿ ಸರ್ಕಾರವು ಹೆಚ್ಚು ಜಾಗರೂಕವಾಗಿರಬೇಕು ಮತ್ತು ವಿಶೇಷವಾಗಿ ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಸಿದ್ಧರಾಗಿರಬೇಕು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಏನಿದು ಪ್ರಕರಣ, ಯಾರಿದು ವಿಕಾಸ್ ದುಬೆ?:
ವಿಕಾಸ್ ದುಬೆ ಓರ್ವ ಉತ್ತರ ಪ್ರದೇಶದ ಕುಖ್ಯಾತ ರೌಡಿಶೀಟರ್. ಈತನ ಮೇಲೆ ಸುಮಾರು 60ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. 2001ರಲ್ಲಿ ಬಿಜೆಪಿ ಪಕ್ಷದ ಸಚಿವರಾಗಿದ್ದ ಸಂತೋಷ್ ಶುಕ್ಲಾ ಅವರನ್ನು ಪೊಲೀಸ್ ಠಾಣೆಯಲ್ಲಿಯೇ ಗುಂಡಿಕ್ಕಿ ಕೊಂದು ಕೊಲೆಗಾರನಾಗಿ ಗುರುತಿಸಿಕೊಂಡಿದ್ದ. ತದನಂತರ ಹಲವಾರು ಹತ್ಯೆಗಳಲ್ಲಿ ಭಾಗಿಯಾಗಿ ಸಾಕಷ್ಟು ಹಣ ಗಳಿಸಿ ನಂತರ ರಾಜಕೀಯವಾಗಿ ಸಬಲವಾಗಿ ಬೆಳೆದು ಇಂದು ಉತ್ತರ ಪ್ರದೇಶ ರಾಜ್ಯದ ದುಷ್ಟ ಶಕ್ತಿಯಾಗಿ ಪರಿವರ್ತನೆಗೊಂಡಿದ್ದಾನೆ.
ಕೆಲವು ದಿನಗಳ ಹಿಂದೆ ವಿಕಾಸ್ ದುಬೆ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದರಿಂದ, ಕಾನ್ಪುರ ಪೊಲೀಸ್ ತಂಡವೊಂದು ವಿಕಾಸ್ ದುಬೆಯನ್ನು ಬಂಧಿಸಲು ಆತನ ಮನೆಗೆ ಹೋಗಿತ್ತು. ಬಿಕಾರು ಗ್ರಾಮಕ್ಕೆ ಪೊಲೀಸ್ ತಂಡ ತಲುಪಿದ ಕೂಡಲೇ, ಹಲವಾರು ಜೆಸಿಬಿಗಳನ್ನು ರಸ್ತೆಯಲ್ಲಿ ನಿಲ್ಲಿಸಿ ರಸ್ತೆಯನ್ನು ಬ್ಲಾಕ್ ಮಾಡಿದ್ದ ವಿಕಾಸ್ ದುಬೆ. ಪೊಲೀಸ್ ತಂಡವನ್ನು ತಮ್ಮ ವಾಹನದಿಂದ ಕೆಳಗಿಳಿಯುವಂತೆ ಒತ್ತಾಯಿಸಿ, ನಂತರ ಮನೆಯ ಮೇಲೆ ನಿಂತುಕೊಂಡು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಉತ್ತರ ಪ್ರದೇಶದ ಡಿಜಿಪಿ ಹೆಚ್‍ಸಿ ಅವಸ್ಥಿ ಹೇಳಿದ್ದಾರೆ.