ಕಾನ್ಪುರ:ಓರ್ವ ಡಿವೈಎಸ್‌ಪಿ ಸೇರಿ ಎಂಟು ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಕಾನ್ಪುರ ಹತ್ಯಾಕಾಂಡದ ಪ್ರಮುಖ ಆರೋಪಿ ರೌಡಿಶೀಟರ್ ವಿಕಾಸ್ ದುಬೆಯನ್ನು ಇವತ್ತು ವಿಶೇಷ ಕಾರ್ಯಪಡೆ ಪೊಲೀಸರು (ಎಸ್‌ಟಿಎಫ್) ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ.
ನಿನ್ನೆ ಮಧ್ಯೆಪ್ರದೇಶದ ಉಜ್ಜೈನಿಯ ದೇವಸ್ಥಾನದ ಸಮೀಪ ವಿಕಾಸ್ ದುಬೆಯನ್ನು ಬಂಧಿಸಲಾಗಿತ್ತು. ಉತ್ತರಪ್ರದೇಶದ ಕಾನ್ಪುರ ಪೊಲೀಸರಿಗೆ ಉಜ್ಜೈನಿ ಪೊಲೀಸರು ಆರೋಪಿಯನ್ನು ಹಸ್ತಾಂತರಿಸಿದ್ದರು. ಇಂದು ಬೆಳಗ್ಗೆ ಕಾನ್ಪುರಕ್ಕೆ ಕರೆದೊಯ್ಯುವ ಮಾರ್ಗದಲ್ಲಿ ವಿಕಾಸ್ ದುಬೆ ಇದ್ದ ಕಾರು ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ, ಪೊಲೀಸರ ಗನ್ ಕಿತ್ಕೊಂಡು ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಮತ್ತು ವಿಕಾಸ್ ದುಬೆ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಯುಪಿ ಪೊಲೀಸರು ಆರೋಪಿಯನ್ನು ಎನ್ಕೌಂಟರ್ ಮಾಡಿದ್ದಾರೆ.
ಎನ್‌ಕೌಂಟರ್‌ನಲ್ಲಿ ವಿಕಾಸ್ ಸೊಂಟ, ಎದೆ ಮತ್ತು ಹೊಟ್ಟೆ ಭಾಗಗಳಿಗೆ ಮೂರು ಗುಂಡುಗಳನ್ನು ತಗುಲಿದ್ದವು. ಕೂಡಲೇ ಆತನನ್ನು ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗ ವೈದ್ಯರು ದುಬೆ ಸಾವನ್ನಪ್ಪಿರುವ ಕುರಿತು ಖಚಿತಪಡಿಸಿದರು ಎಂದು ಸ್ಎಸ್ಪಿ ದಿನೇಶ್ ಕುಮಾರ್ ಹೇಳಿದ್ದಾರೆ.
ಪ್ರಕರಣ ನಡೆದು ಬಂದ ಹಾದಿ:
ಚೌಬೇಪುರ ಪೊಲೀಸ್ ಠಾಣಾ ಪ್ರದೇಶದಲ್ಲಿ ಸುಮಾರು 60 ಕ್ರಿಮಿನಲ್ ಕೇಸ್ಗಳನ್ನು ಹೊಂದಿರುವ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿದ್ದ ವೇಳೆ ಎನ್ಕೌಂಟರ್ ನಡೆದಿತ್ತು. ಈ ವೇಳೆ, ಡೆಪ್ಯುಟಿ ಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಸಬ್ ಇನ್ಸ್ಪೆಕ್ಟರ್ಗಳು ಹಾಗೂ ನಾಲ್ವರು ಕಾನ್ಸ್ಟೇಬಲ್ಗಳು ಸೇರಿ 8 ಮಂದಿ ಪೊಲೀಸರು ಹುತಾತ್ಮರಾಗಿದ್ದರು.
ಕಾನ್ಪುರ್ ಎನ್ಕೌಂಟರ್: ಜುಲೈ 02ರಿಂದ ಜುಲೈ10ರವರೆಗಿನ ವಿವರ:
- ಜುಲೈ 2:ವಿಕಾಸ್ ದುಬೆಯನ್ನು ಬಂಧಿಸುವ ಸಲುವಾಗಿ ಜುಲೈ 2 ರ ರಾತ್ರಿ ಮೂರು ಪೊಲೀಸ್ ಠಾಣೆಗಳ ಅಧಿಕಾರಿಗಳು ಬಿಕಾರು ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ವಿಕಾಸ್ ಮತ್ತು ಆತನ ಗ್ಯಾಂಗ್ ಪ್ರತಿದಾಳಿ ನಡೆಸಿ ಉಪ ಎಸ್ಪಿ ಸೇರಿದಂತೆ 8 ಪೊಲೀಸರನ್ನು ಕೊಂದಿತ್ತು.
- ಜುಲೈ 3: ಪೊಲೀಸರು ವಿಕಾಸ್ ಅವರ ಮಾವ ಪ್ರೇಮ್ ಪ್ರಕಾಶ್ ಪಾಂಡೆ ಮತ್ತು ಸಹವರ್ತಿ ಅತುಲ್ ದುಬೆ ಅವರನ್ನು ಎನ್ಕೌಂಟರ್ ಮಾಡುತ್ತಾರೆ. ಪ್ರಕರಣ ಸಂಬಂಧ ಪ್ರಮುಖ 22 ಆರೋಪಿಗಳ ಸೇರಿದಂತೆ 60 ಜನರ ಮೇಲೆ ಎಫ್ಐಆರ್ ದಾಖಲಿಸಿ, ಪ್ರಮುಖ ಆರೋಪಿ ದುಬೆ ಬಂಧನಕ್ಕಾಗಿ 40 ವಿಶೇಷ ತಂಡಗಳನ್ನು ರಚಿಸಲಾಗಿತ್ತು.
- ಜುಲೈ 4:ವಿಕಾಸ್ ದುಬೆಗೆ ಮಾಹಿತಿ ನೀಡುವ ವಿಷಯದಲ್ಲಿ ಶಂಕಿತ ಚೌಬೆಪುರ ಪೊಲೀಸ್ ಠಾಣೆ ಅಧ್ಯಕ್ಷ ವಿನಯ್ ತಿವಾರಿ ಅವರನ್ನು ಎಸ್‌ಟಿಎಫ್ ವಿಚಾರಣೆ ನಡೆಸಿತ್ತು. ಅದೇ ಸಮಯದಲ್ಲಿ ಅನೇಕ ಪೊಲೀಸರನ್ನು ಅಮಾನತುಗೊಳಿಸಲಾಗಿಳಿಸಿ, ವಿಚಾರಣೆ ಆರಂಭಿಸಿತ್ತು.
- ಜುಲೈ 5: ವಿಕಾಸ್ ಸೇವಕ ಮತ್ತು ಆತನ ಸಹಾಯಕ ದಯಶಂಕರ್ ಅಗ್ನಿಹೋತ್ರಿ ಅಲಿಯಾಸ್ ಕಲ್ಲುವನ್ನು ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ನಡೆದ ಎನ್ಕೌಟರ್ನಲ್ಲಿ ಆತನ ಸಹಾಯಕ ಗಾಯಗೊಂಡಿದ್ದ. ದುಬೆಗೆ ತಮ್ಮನ್ನು ಬಂಧಿಸಲು ಬರುವ ವಿಚಾರ ಮೊದಲೇ ತಿಳಿದಿತ್ತು. ಈ ಕುರಿತಂತೆ ಪೊಲೀಸ್ ಠಾಣೆಯಿಂದ ದೂರವಾಣಿ ಕರೆ ಬಂದಿತ್ತು ಎಂದು ದುಬೆ ಸೇವಕ ತನಿಖೆಯಲ್ಲಿ ತಿಳಿಸಿದ್ದನು.
- ಜುಲೈ 6: ಪ್ರಕರಣ ಸಂಬಂಧ ದಯಾಶಂಕರ್ ಅವರ ಪತ್ನಿ ರೇಖಾ ಸೇರಿದಂತೆ ಅಮರ್ ದುಬೆ ಅವರ ತಾಯಿ ಕ್ಷಮಾ ದುಬೆ ಮತ್ತು 3 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಶೂಟೌಟ್ ಘಟನೆಯ ಸಮಯದಲ್ಲಿ ಪೊಲೀಸರು ದುಷ್ಕರ್ಮಿಗಳನ್ನು ತಪ್ಪಿಸಿಕೊಳ್ಳದಂತೆ ಮಾಹಿತಿ ನೀಡುವಂತೆ ಕ್ಷಮಾ ದುಬೆ ಅವರನ್ನು ಸಂಪರ್ಕಿಸಿದ್ದರು. ಪೊಲೀಸರಿಗೆ ಸಹಾಯ ಮಾಡುವ ಬದಲು ಕ್ಷಮಾ, ದುಷ್ಕರ್ಮಿಗಳಿಗೆ ಪೊಲೀಸರಿರುವ ಸ್ಥಳದ ಕುರಿತು ಮಾಹಿತಿ ನೀಡಿದ್ದರು.
- ಜುಲೈ 7:ಮಂತ್ರಿಗಳು ಹುತಾತ್ಮರಾದ ಪೊಲೀಸರ ಮನೆಗಳಿಗೆ ತೆರಳಿ ಒಂದು ಕೋಟಿ ರೂ ಪರಿಹಾರ ಧನ ನೀಡಿದರು. ಈ ದಿನ ಎಸ್‌ಟಿಎಫ್ ಚೌಬೆಪುರ ಪೊಲೀಸ್ ಠಾಣೆಯ ಪೊಲೀಸ್ ಮತ್ತು ಕಾನ್ಸ್‌ಸ್ಟೇಬಲ್ ವಿಕಾಸ್ ದುಬೆ ಅವರೊಂದಿಗೆ ಎನ್ಕೌಂಟರ್ ಮೊದಲು ಫೋನ್‌ನಲ್ಲಿ ಮಾತನಾಡಿದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿತ್ತು.
- ಜುಲೈ 8:ಎಸ್‌ಟಿಎಫ್ ವಿಕಾಸ್ ಸಹಾಯಕ ಅಮರ್ ದುಬೆ ಅವರನ್ನು ಕೊಂದು, ಪ್ರಭಾತ್ ಮಿಶ್ರಾ ಅಲಿಯಾಸ್ ಕಾರ್ತಿಕೇಯ ಸೇರಿದಂತೆ ಆರೋಪಿಗಳನ್ನು ಬಂಧಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚುಬೆಪುರದ ಮಾಜಿ ಎಸ್‌ಒ ವಿನಯ್ ತಿವಾರಿ ಮತ್ತು ಬೀಟ್ ಇನ್‌ಚಾರ್ಜ್ ಕೆ.ಕೆ.ಶರ್ಮಾ ಅವರನ್ನು ಬಂಧಿಸಿದ್ದು, ಎನ್ಕೌಂಟರ್ ನಡೆದ ಸಮಯದಲ್ಲಿ ಇಬ್ಬರೂ ಪರಾರಿಯಾಗಿದ್ದರು ಎನ್ನಲಾಗುತ್ತಿದೆ.
- ಜುಲೈ 9: ಎನ್‌ಕೌಂಟರ್‌ನಲ್ಲಿ ಪ್ರಭಾತ್ ಮಿಶ್ರಾ ಅಲಿಯಾಸ್ ಕಾರ್ತಿಕೇಯ ಮತ್ತು ರಣಬೀರ್ ಶುಕ್ಲಾ ಅಲಿಯಾಸ್ ಬಾವಾ ಸಾವನ್ನಪ್ಪಿದ್ದು, ಅದೇ ದಿನ ವಿಕಾಸ್ ದುಬೆನ್ನನ್ನು ಉಜ್ಜಯಿನಿಯಲ್ಲಿ ಬಂಧಿಸಿ, ಉತ್ತರ ಪ್ರದೇಶದ ಎಸ್‌ಟಿಎಫ್ ತಂಡ ಮಧ್ಯಪ್ರದೇಶಕ್ಕೆ ತೆರಳಿತ್ತು.
- ಜುಲೈ 10:ಯುಪಿ ಎಸ್‌ಟಿಎಫ್ ವಿಕಾಸ್ ದುಬೆ ಉಜ್ಜಯಿನಿಯಿಂದ ಕಾನ್ಪುರಕ್ಕೆ ಬರುತ್ತಿದ್ದಾಗ ಈ ಮಧ್ಯೆ, ಬೆಂಗಾವಲು ಕಾರು ಪಲ್ಟಿಯಾಗಿದೆ. ಈ ವೇಳೆ ದುಬೆ ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸರು ವಿಕಾಸ್ಗೆ ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ.