ಕಾನ್ಪುರ: 8 ಜನ ಪೊಲೀಸರ ಹತ್ಯೆ ಪ್ರಕರಣದ ರೂವಾರಿ, ರೌಡಿಶೀಟರ್ ವಿಕಾಸ್ ದುಬೆಯ ಮತ್ತಿಬ್ಬರು ಸಹಚರರನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಎನ್ಕೌಂಟರ್ ಮಾಡಿದೆ.
ರೌಡಿಶೀಟರ್ ವಿಕಾಸ್ ದುಬೆಯ ಮತ್ತಿಬ್ಬರು ಸಹಚರರು ಪೊಲೀಸ್ ಎನ್ಕೌಂಟರ್ಗೆ ಬಲಿ - Prabhat mishra encounter
ಪೊಲೀಸರ ಹತ್ಯೆ ಪ್ರಕರಣದ ರೂವಾರಿ, ರೌಡಿಶೀಟರ್ ವಿಕಾಸ್ ದುಬೆಯ ಮತ್ತಿಬ್ಬರು ಸಹಚರರು ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲ ಪ್ರಮುಖ ಆರೋಪಿಯೂ ಮಧ್ಯಪ್ರದೇಶದಲ್ಲಿ ಸೆರೆ ಸಿಕ್ಕಿದ್ದಾನೆ.
ಗುರುವಾರ ಬೆಳಗ್ಗೆ ಕಾನ್ಪುರ ಮತ್ತು ಇಟವಾದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ದುಬೆಯ ಇಬ್ಬರು ಸಹಾಯಕರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ದುಬೆ ಸಹಚರ ಪ್ರಭಾತ್ ಮಿಶ್ರಾ ಎಂಬಾತನನ್ನು ಬುಧವಾರ ಬಂಧಿಸಲಾಗಿತ್ತು, ಪೊಲೀಸ್ ಕಸ್ಟಡಿಯಿಂದ ಪ್ರಭಾತ್ ಪರಾರಿಯಾಗಲು ಯತ್ನಿಸಿದಾಗ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡಿದ್ದ ಆತ ಕಾನ್ಪುರಕ್ಕೆ ಕರೆತರುತ್ತಿದ್ದಾಗ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಗೆಯೇ ಕಾನ್ಪುರದಲ್ಲಿ ಪೊಲೀಸರೊಂದಿಗೆ ನಡೆದ ಎನ್ಕೌಂಟರ್ನಲ್ಲಿ ವಿಕಾಸ್ ದುಬೆಯ ಇನ್ನೊಬ್ಬ ಸಹಚರ ರಣವೀರ್ ಶುಕ್ಲಾ ಗುಂಡೇಟಿಗೆ ಬಲಿಯಾಗಿದ್ದಾನೆ. ಈ ಇಬ್ಬರು ಸಹಚರರು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ. ಅತ್ತ ಪ್ರಮುಖ ಆರೋಪಿಯನ್ನ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 8 ಪೊಲೀಸರ ಸಾವಿಗೆ ಪ್ರತೀಕಾರವಾಗಿ ದುಬೆಯ ಹಲವು ಬಂಟರನ್ನ ಉತ್ತರಪ್ರದೇಶ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. 40 ತಂಡಗಳನ್ನ ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ರಚನೆ ಮಾಡಿತ್ತು.