ಹೈದರಾಬಾದ್: ವೈದ್ಯೆಯಾಗಬೇಕು ಎಂದು ಬಯಸಿದ್ದರು ಅವರು. ಆದರೆ ಆಕೆ ಕಾನೂನು ವ್ಯಾಸಂಗ ಕೈಗೆತ್ತಿಕೊಳ್ಳಬೇಕೆಂಬುದು ತಂದೆಯ ಇಚ್ಛೆಯಾಗಿತ್ತು. ತಮ್ಮ ತಂದೆಯೆಡೆಗಿನ ಪ್ರೀತಿ ಮತ್ತು ಅವರ ಮಾತಿಗೆ ಗೌರವ ನೀಡುವುದಕ್ಕಾಗಿ ಕಾನುನು ಶಿಕ್ಷಣ ಒಪ್ಪಿಕೊಂಡರು. ಖಂಡಗಳು ಮತ್ತು ಉಪಖಂಡಗಳು (ವಿಧಿ ಮತ್ತು ಉಪವಿಧಿ) ಅವರ ಬೆರಳ ತುದಿಯಲ್ಲಿದ್ದವು. ನೂರಾರು ಪ್ರಕರಣಗಳು, ಸಾವಿರಾರು (ನ್ಯಾಯ) ವಿಚಾರಣೆಗಳು, ಲೆಕ್ಕವಿಲ್ಲದಷ್ಟು ಗೆಲುವುಗಳು. ಅವರು ಬೇರಾರೂ ಅಲ್ಲ, ಅವರೇ ಕನ್ನೇಗಂಟಿ ಲಲಿತಾ.
ಆಂಧ್ರಪ್ರದೇಶದ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ, ಈನಾಡು 'ವಸುಂಧರಾ' ಜೊತೆ ಅವರು ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದ್ದಾರೆ. ಅವರ ಪಯಣದ ವಿವರಗಳನ್ನು ಅವರ ಮಾತಿನಲ್ಲಿಯೇ ಕೇಳಿ…
ಮಗುವಾಗಿದ್ದಾಗಿನಿಂದ, ಬಿಳಿ ಕೋಟು ಧರಿಸುವ ಕನಸನ್ನು ನಾನು ಕಾಣುತ್ತಿದ್ದೆ. ಅದೇ ಕಾರಣಕ್ಕಾಗಿ ಪದವಿಪೂರ್ವ ಹಂತದಲ್ಲಿ ನಾನು ಬಿಐಪಿಸಿ (ಬಯಾಲಜಿ, ಫಿಜಿಕ್ಸ್, ಕೆಮಿಸ್ಟ್ರಿ) ವಿಷಯಗಳನ್ನು ಆಯ್ದುಕೊಂಡಿದ್ದೆ. ಆದರೆ, ವಿಧಿ ಬಯಕೆಯೇ ಬೇರೆಯಾಗಿದ್ದರಿಂದ ನಾನು ಕರಿ ಕೋಟು ತೊಡುವಂತಾಯಿತು. ವಕೀಲಳಾಗಿ ನಾನು ವೃತ್ತಿ ಪ್ರಾರಂಭಿಸಿದಾಗ, ನ್ಯಾಯಮೂರ್ತಿ ಲಲಿತಾ ಆಗುತ್ತೇನೆಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಕೇವಲ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನವೇ ನನ್ನನ್ನು ಈ ಸ್ಥಾನದವರೆಗೆ ಕರೆದುಕೊಂಡು ಬಂದಿದೆ ಎಂದು ನಾನು ನಂಬಿದ್ದೇನೆ.
ನಾನು ಜನಿಸಿದ್ದು ಗುಂಟೂರು ಜಿಲ್ಲೆ ಬಾಪಟ್ಲಾ ಹತ್ತಿರದ ಜಮ್ಮುಲಪಾಳೆನಲ್ಲಿ. ಕೊಮ್ಮಿನೇನಿ ಅಂಕಮ್ಮ ಚೌಧರಿ ಮತ್ತು ಅಮರೇಶ್ವರಿ ನನ್ನ ತಂದೆತಾಯಿ. ನನ್ನ ತಂದೆ ಇಂಗ್ಲಿಷ್ ಸಾಹಿತ್ಯದ ಪದವೀಧರ. ನಾನು 9 ವರ್ಷದವಳಾಗಿದ್ದಾಗ, ನಮ್ಮ ಕುಟುಂಬ ಹೈದರಾಬಾದ್‌ಗೆ ಸ್ಥಳಾಂತರಗೊಂಡಿತು. ಪಾಡಲ ರಾಮ ರೆಡ್ಡಿ ಲಾ ಕಾಲೇಜಿನಲ್ಲಿ ನಾನು ಕಾನೂನು ಅಧ್ಯಯನ ಮಾಡಿದೆ. 1994ರಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ವಕೀಲಳಾಗಿ ಹೆಸರು ನೋಂದಾಯಿಸಿಕೊಂಡೆ.
ಕನ್ನೇಗಂಟಿ ವಿಜಯ ಅವರೊಂದಿಗೆ 2008ರಲ್ಲಿ ನನ್ನ ಮದುವೆಯಾಯಿತು. ನನ್ನ ಪತಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಲ್ಯಾಂಡ್‌ಸ್ಕೇಪ್ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಮಗ ಮತ್ತು ಮಗಳಿಗೆ ಜನ್ಮ ನೀಡುವುದರೊಂದಿಗೆ ನಮ್ಮದು ನಾಲ್ವರು ಸದಸ್ಯರ ಕುಟುಂಬವಾಯಿತು. ಆ ದಿನಗಳಲ್ಲಿ, ನನ್ನ ವೃತ್ತಿ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಡುವೆ ಸಮನ್ವಯ ಸಾಧಿಸಲು ನಾನು ಪ್ರಯತ್ನಿಸಬೇಕಾಗಿತ್ತು. ಎಂಆರ್‌ಕೆ ಚೌಧರಿ, ಕೆ. ಹರಿನಾಥ್ ಮತ್ತು ಒ. ಮನೋಹರ ರೆಡ್ಡಿ ಅವರೊಂದಿಗೆ ಕೆಲಸ ಮಾಡಿದ್ದು ವಕೀಲೆಯಾಗಿ ಸಾಕಷ್ಟು ಅನುಭವ ಪಡೆದುಕೊಳ್ಳಲು ನನಗೆ ನೆರವಾಯಿತು. ಮಕ್ಕಳು ಬೆಳೆಯುತ್ತಾ ಹೋದಂತೆ, ನಾನು ನನ್ನ ವೃತ್ತಿಯ ಮೇಲೆ ಪೂರ್ತಿ ಗಮನ ಹರಿಸಿದೆ. ಆ ಕಠಿಣ ದಿನಗಳಲ್ಲಿ, ನನ್ನ ಅಮ್ಮ ನನಗೆ ಬೆಂಬಲ ನೀಡಿದ ರೀತಿಯನ್ನು ನಾನೆಂದಿಗೂ ಮರೆಯಲಾರೆ.
ನಾನು ಸ್ವತಂತ್ರವಾಗಿ ವಕೀಲಿ ವೃತ್ತಿ ಪ್ರಾರಂಭಿಸಿದ್ದು 2008ರಲ್ಲಿ. ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಎಲ್ಲಾ ರೀತಿಯ ಪ್ರಕರಣಗಳನ್ನೂ ನಾನು ಅಭ್ಯಾಸ ಮಾಡುತ್ತಿದ್ದೆ. ಪ್ರಕರಣವೊಂದನ್ನು ಗೆಲ್ಲುವುದಕ್ಕಿಂತ ಹೆಚ್ಚಾಗಿ ಕಕ್ಷಿದಾರರ ಮುಖದಲ್ಲಿ ಕಾಣುವ ಸಂತಸ ನನಗೆ ತೃಪ್ತಿ ಕೊಡುತ್ತದೆ. ಗೆದ್ದವರಿಗೆ ಶತ್ರುಗಳಿರುತ್ತಾರೆ ಮತ್ತು ಅವರು ನಮ್ಮನ್ನು ಕೆಳಗೆ ಎಳೆಯಲು ನೋಡುತ್ತಾರೆ. ಅಂತಹ ಹಲವಾರು ಪ್ರಕರಣಗಳನ್ನು ನಾನು ಎದುರಿಸಿದೆ. ಆದರೆ, ಅಂತಹ ಪ್ರತಿಯೊಂದು ಸವಾಲನ್ನೂ ನಾನು ಆತ್ಮವಿಶ್ವಾಸದಿಂದ ಎದುರಿಸಿ ಗೆದ್ದಿದ್ದೇನೆ.
ಪುರುಷರ ಪ್ರಾಬಲ್ಯವಿಲ್ಲದ ಕ್ಷೇತ್ರ ಯಾವುದೂ ಇಲ್ಲ. ಆದರೆ, ಯಾವ ಸಾಧನೆಯನ್ನಾದರೂ ಸಾಧಿಸುವ ಸಾಮರ್ಥ್ಯ ಮಹಿಳೆಯರಿಗೆ ಇದೆ. ತಾಳ್ಮೆ ಮತ್ತು ದೃಢ ನಿಶ್ಚಯ ನಮ್ಮ ಮೂಲ ಶಕ್ತಿಗಳು. ಕುಟುಂಬದಿಂದ ಸೂಕ್ತ ಬೆಂಬಲ ಸಿಕ್ಕಲ್ಲಿ, ನಾವು ಯಾವ ಎತ್ತರವನ್ನಾದರೂ ಏರಬಲ್ಲೆವು. ವಕೀಲಿ ವೃತ್ತಿಯಲ್ಲಿ ಉತ್ತಮ ಸಾಧನೆಗೈಯಲು ನಾವು ನಿತ್ಯ ಕಷ್ಟಪಟ್ಟು ಕೆಲಸ ಮಾಡಲೇಬೇಕು. ಪ್ರತಿಯೊಂದು ಹೊಸ ಕಾನೂನು ಮತ್ತು ತಿದ್ದುಪಡಿಯ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಂಡಿರುವುದು ಅವಶ್ಯ. ನಿಷ್ಪಕ್ಷಪಾತವಾಗಿರದೆ ನಾವು ನ್ಯಾಯ ನಿರ್ಣಯ ನೀಡಲಾಗುವುದಿಲ್ಲ. ಇದುವರೆಗೆ ನಾನು ಸಾವಿರಾರು ಪ್ರಕರಣಗಳನ್ನು ನಡೆಸಿದ್ದೇನೆ. ಮತ್ತು ಈಗ, ನಾನೇ ನ್ಯಾಯಾಧೀಶೆಯಾಗಿದ್ದೇನೆ. ಇಂಥದೊಂದು ಅದ್ಭುತ ಅವಕಾಶ ನೀಡಿದ್ದಕ್ಕಾಗಿ ನಾನು ದೇವರಿಗೆ ಕೃತಜ್ಞಳಾಗಿದ್ದೇನೆ. ನನ್ನ ತಂದೆತಾಯಿಗಳು ನನ್ನ ಬಗ್ಗೆ ಹೆಮ್ಮೆಪಡುತ್ತಿದ್ದಾರೆ. ನನ್ನ ಪತಿ ಮತ್ತು ಮಕ್ಕಳು ಸಂಭ್ರಮಪಡುತ್ತಿದ್ದಾರೆ. ನನ್ನ ಮಗ ಗೌತಮ್ ಜರ್ಮನಿಯ ಜೇಕಬ್ಸ್ ವಿಶ್ವವಿದ್ಯಾಲಯದಿಂದ ಸಪ್ಲೈ ಚೇನ್ ಮ್ಯಾನೇಜ್‌ಮೆಂಟ್ ಅಂಡ್ ಲಾಜಿಸ್ಟಿಕ್ಸ್‌ನಲ್ಲಿ ಪದವಿ ಪಡೆದಿದ್ದಾನೆ. ಮಗಳು ಮಾನಸ ನವದೆಹಲಿಯಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದಾಳೆ. ನಾನು ಈ ಹಂತ ತಲುಪಲು ಸಾಧ್ಯವಾಗಿದ್ದು ನನ್ನ ಕುಟುಂಬದ ನಿರಂತರ ಬೆಂಬಲದಿಂದ ಮಾತ್ರ.
ಆಂಧ್ರಪ್ರದೇಶದ ಕೃಷಿ ಮಾರುಕಟ್ಟೆ ಸಮಿತಿಗಳ ಪರ ವಕೀಲೆಯಾಗಿ ನಾನು ಕೆಲಸ ಮಾಡಿದ್ದು, ಅವರ ಪರವಾಗಿ ವಾದಿಸಿದ್ದೇನೆ. 2011ರಲ್ಲಿ ನಾನು ತಿರುಮಲ ತಿರುಪತಿ ದೇವಸ್ಥಾನಮ್‌ನ ವಕೀಲೆಯಾಗಿ ಆಯ್ಕೆಯಾದೆ. ಆರ್‌ಟಿಐ ಕಾಯಿದೆ ವ್ಯಾಪ್ತಿಯಿಂದ ಟಿಟಿಡಿಯನ್ನು ಹೊರಗಿಡಬೇಕೆಂಬ ಅಹವಾಲಿನ ವಿರುದ್ಧ ನಾನು ವಾದಿಸಿದ್ದೇನೆ. ಅದೇ ರೀತಿ ತಿರುಮಲ ದೇವಸ್ಥಾನದ 1,000 ಕಂಬಗಳ ಮಂಟಪವನ್ನು ಮರು ನಿರ್ಮಿಸಬೇಕೆಂಬ ಪ್ರಕರಣದಲ್ಲಿಯೂ ನಾನು ವಿರುದ್ಧವಾಗಿ ವಾದ ಮಾಡಿದ್ದೇನೆ. ಸುರಕ್ಷತೆಯ ದೃಷ್ಟಿಯಿಂದ ಮಂಟಪವನ್ನು ಮತ್ತೆ ನಿರ್ಮಿಸಲು ಸಾಧ್ಯವಿಲ್ಲ ಎಂಬ ನಮ್ಮ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು. ಟಿಟಿಡಿಗೆ ನಾನು ಉಚಿತವಾಗಿ ವಕಾಲತ್ತು ಮಾಡಿದ್ದೇನೆ. ಸಂಸ್ಕೃತ ವಿಶ್ವವಿದ್ಯಾಲಯಕ್ಕೂ ನಾನು ವಕೀಲೆಯಾಗಿ ಆಯ್ಕೆಯಾಗಿದ್ದೆ. ನನ್ನ ವೃತ್ತಿ ಜೀವನದಲ್ಲಿ ನಾನು ಯಾವೊಂದು ಪ್ರಕರಣದಲ್ಲಿಯೂ ಸೋತಿಲ್ಲ. ಪ್ರಕರಣವನ್ನು ಕೈಗೆತ್ತಿಕೊಳ್ಳುವುದಕ್ಕೂ ಮುನ್ನ, ಅದು ನ್ಯಾಯೋಚಿತವಾಗಿದೆಯೇ ಎಂಬುದನ್ನು ನಾನು ಪರಿಶೀಲಿಸುತ್ತೇನೆ. ನನ್ನ ವೃತ್ತಿ ಜೀವನದ ಯಶಸ್ಸಿನ ರಹಸ್ಯ ಇದೇ.
ನನ್ನ ತಂದೆಯವರು ರವೀಂದ್ರನಾಥ ಟ್ಯಾಗೋರ್ ಅವರ ಕಟ್ಟಾ ಅಭಿಮಾನಿ. ಲಲಿತಾ ಎಂಬುದು ಟ್ಯಾಗೋರ್ ಅವರ ಕಾದಂಬರಿಗಳಲ್ಲಿ ಬರುವ ಪಾತ್ರಗಳ ಪೈಕಿ ಒಂದು. ನಾನು ಹುಟ್ಟುವ ಸಂದರ್ಭದಲ್ಲಿ ನನ್ನ ತಂದೆ ಆ ಕಾದಂಬರಿಯನ್ನು ಓದಿದ್ದರಿಂದ, ನನಗೆ ಲಲಿತಾ ಎಂದು ಹೆಸರಿಟ್ಟರು. ವೈದ್ಯೆಯಾಗಬೇಕೆಂದು ನಾನು ಬಯಸಿದ್ದೆನಾದರೂ, ಎಷ್ಟು ಸಾಧ್ಯವೋ ಅಷ್ಟು ಜನರಿಗೆ ನ್ಯಾಯ ದೊರಕಿಸಲಿಕ್ಕಾಗಿ ನಾನು ಕಾನೂನು ಅಧ್ಯಯನವನ್ನೇ ಕೈಗೊಳ್ಳಬೇಕೆಂದು ನನ್ನ ತಂದೆ ಆಗ್ರಹಿಸಿದರು. ಹೀಗಾಗಿ, ನಾನು ಕಾನೂನು ಅಧ್ಯಯನ ಮಾಡಿದೆ. ಅಷ್ಟೇ ಅಲ್ಲ, ಅದರಲ್ಲಿ ದೊಡ್ಡ ಸಾಧನೆಯನ್ನೂ ಮಾಡಿದೆ.