ಮುಂಬೈ: ಶಿವಸೇನೆಯಿಂದ ಬೆದರಿಕೆ ಬೆನ್ನಲ್ಲೇ ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈಗೆ ಇಂದು ಧಾವಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಹುಟ್ಟೂರಾದ ಹಿಮಾಚಲ ಪ್ರದೇಶದ ಮಂಡಿಯಿಂದ ಚಂಡೀಗಢಕ್ಕೆ ತೆರಳಿದ್ದು, ಅಲ್ಲಿಂದ ವಿಮಾನದ ಮೂಲಕ ನೇರವಾಗಿ ಮುಂಬೈಗೆ ಬರಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಂಗನಾ ನಾನು ರಾಣಿ ಲಕ್ಷ್ಮೀಬಾಯಿಯ ಧೈರ್ಯ, ಶೌರ್ಯ ಮತ್ತು ತ್ಯಾಗವನ್ನು ನನ್ನ ಚಿತ್ರಗಳಲ್ಲಿ ಪ್ರದರ್ಶಿಸಿ ಅಳವಡಿಸಿಕೊಂಡಿದ್ದೇನೆ. ನನ್ನೂರಾದ ಮಹಾರಾಷ್ಟ್ರಕ್ಕೆ ಬರದಂತೆ ತಡೆಯುತ್ತಿರುವುದು ತುಂಬಾ ದುಃಖದ ವಿಚಾರ. ತಪ್ಪಿನ ವಿರುದ್ಧ ಧ್ವನಿಯೆತ್ತುತ್ತೇನೆ. ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಂಡೀಗಢಕ್ಕೆ ತೆರಳುವ ಮೊದಲು ಕಂಗನಾ ಹಿಮಾಚಲ ಪ್ರದೇಶದ ಹಂಪಿಪುರ ಜಿಲ್ಲೆಯ ಕೋಠಿ ಪ್ರದೇಶದಲ್ಲಿರುವ ದೇವಾಲಯವೊಂದರಲ್ಲಿ ಪೂಜೆ ಸಲ್ಲಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಎರಡನೇ ಬಾರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಮಂಡಿ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ದೇವೇಂದರ್ ಶರ್ಮಾ ಮಾಹಿತಿ ನೀಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಮಹಾರಾಷ್ಟ್ರದ ಶಿವಸೇನೆ ಹಾಗೂ ಕಂಗನಾ ನಡುವೆ ವಾಕ್ಸಮರ ನಡೆದಿತ್ತು. ಈ ವೇಳೆ ಮುಂಬೈಗೆ ಮಿನಿ ಪಾಕಿಸ್ತಾನ ಎಂದು ಕಂಗನಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವೇಳೆ ಶಿವಸೇನಾ ನಾಯಕರು ಕೂಡಾ ಮುಂಬೈಗೆ ಬರದಂತೆ ಬೆದರಿಕೆವೊಡ್ಡಿದ ಹಿನ್ನೆಲೆ ನಟಿಗೆ ಕೇಂದ್ರ ಸರ್ಕಾರ ವೈ ಪ್ಲಸ್ ( Y-plus) ಭದ್ರತೆ ನೀಡಿದೆ.