ಮುಂಬೈ: ವಾಣಿಜ್ಯ ನಗರಿ ಮುಂಬೈಯನ್ನ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ ಬಳಿಕ ಮಹಾರಾಷ್ಟ್ರ ಆಡಳಿತರೂಢ ಪಕ್ಷದ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಮುಂಬೈಗೆ ಆಗಮಿಸಿದ್ದಾರೆ.ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಅವರಿಗೆ ದೊಡ್ಡ ಮಟ್ಟದ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮುಂಬೈಗೆ ಬಂದಿಳಿದ ನಟಿ ಕಂಗನಾ ರಣಾವತ್ ಕಂಗನಾ ಮುಂಬೈಗೆ ಆಗಮಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮುಂಬೈ ಏರ್ಪೋರ್ಟ್ನಲ್ಲಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜತೆಗೆ ಕಂಗನಾ ನಿಯಮ ಉಲ್ಲಂಘಿಸಿ ತಮ್ಮ ಕಚೇರಿ ನಿರ್ಮಾಣ ಮಾಡಿದ್ದಾರೆ ಎಂದು ಮುಂಬೈ ಮಹಾನಗರ ಪಾಲಿಕೆ ಹೇಳಿದ್ದು, ಅದರಂತೆ ಕಟ್ಟಡ ತೆರವುಗೊಳಿಸಲು ಮುಂದಾಗಿತ್ತು. ಆದರೆ ಈ ವೇಳೆ ಬಾಂಬೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಶಿವಸೇನೆಯ ನಾಯಕ ಸಂಜಯ್ ರಾವತ್ ನನಗೆ ಮುಂಬೈಗೆ ಹಿಂತಿರುಗಬಾರದೆಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮುಂಬೈ ಯಾಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ?" ಎಂದು ಕಂಗನಾ ಟ್ವೀಟ್ ಮಾಡಿದ್ದರು. ಇದಕ್ಕೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು.
ಇದೇ ವಿಚಾರವಾಗಿ ಮಾತನಾಡಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್, ಕಂಗನಾ ಈ ರೀತಿಯಾಗಿ ಹೇಳುವ ಯಾವುದೇ ಹಕ್ಕಿಲ್ಲ. ಅವರಿಗೆ ಮುಂಬೈ ಅಸುರಕ್ಷಿತ ಎಂಬು ಭಾವಿಸಿದರೆ ಇಲ್ಲಿ ಉಳಿದುಕೊಳ್ಳುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಕಂಗನಾ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, ತಮಗೆ ಬೆದರಿಕೆ ಕರೆ ಬಂದಿದೆ ಎಂದಾದ್ರೆ ಅವರು ಟ್ವೀಟರ್ನಲ್ಲಿ ಆಟ ಆಡುವುದನ್ನ ಬಿಟ್ಟು, ಸಾಕ್ಷ್ಯಾಧಾರಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಲಿ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದ ಕಂಗನಾ, ನಾನು ಮುಂಬೈಗೆ ಬರದಂತೆ ಅನೇಕರು ಬೆದರಿಕೆ ಹಾಕ್ತಿದ್ದಾರೆ. ಆದರೆ ಸೆಪ್ಟೆಂಬರ್ 9ಕ್ಕೆ ಮುಂಬೈಗೆ ಬರುತ್ತಿದ್ದೇನೆ. ಏರ್ಪೋರ್ಟ್ನಲ್ಲಿ ಇಳಿದುಕೊಳ್ಳುವ ಸಮಯ ಕೂಡ ಹೇಳುತ್ತಿದ್ದೇನೆ. ಧೈರ್ಯ ಇದ್ದರೆ ತಡೆದು ತೋರಿಸಲಿ ಎಂದು ಹೇಳಿದ್ದರು. .ಇದೇ ವಿಚಾರವಾಗಿ ಮಾತನಾಡಿರುವ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯ್ಕ್, ಕಂಗನಾ ಮುಂಬೈಗೆ ಆಗಮಿಸಿದರೆ ಖಂಡಿತವಾಗಿ ಕಪಾಳಮೋಕ್ಷ ಮಾಡುತ್ತೇನೆ ಎಂದಿದ್ದರು. ಇದೀಗ ಕಂಗನಾ ಮುಂಬೈಗೆ ಆಗಮಿಸಿದ್ದು, ನಿವಾಸದತ್ತ ತೆರಳಿದ್ದಾರೆ.