ತಿರುವಾವೂರ್ (ತಮಿಳುನಾಡು):ಜಿಲ್ಲೆಯ ಪೈಂಗಾಡು ತುಲಸೇಂದ್ರಪುರಂ ಗ್ರಾಮದಲ್ಲೀಗ ಹಬ್ಬದ ವಾತಾವರಣವಿದೆ. ಗ್ರಾಮದೆಲ್ಲೆಡೆ ಸಂಭ್ರಮವೋ ಸಂಭ್ರಮ. ಈ ಗ್ರಾಮ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವುದೇ ಇದಕ್ಕೆ ಕಾರಣ.
ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಅಮೆರಿಕ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಡೆಮಾಕ್ರೆಟಿಕ್ ಪಕ್ಷದಿಂದ ಸ್ಪರ್ಧಿಸಲಿರುವ ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್, ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸಲು ತೊಡೆ ತಟ್ಟಿ ನಿಂತಿದ್ದಾರೆ. ಇದಲ್ಲದೆ ಇದಕ್ಕಾಗಿ ಭಾರಿ ಸಿದ್ಧತೆಯನ್ನು ನಡೆಸಿದ್ದಾರೆ.
ಕಳೆದ ಆಗಸ್ಟ್ 12ರಂದು, ಭಾರತ ಮೂಲದ ಅಮೆರಿಕ ಪ್ರಜೆ ಹಾಗೂ ಕ್ಯಾಲಿಫೋರ್ನಿಯಾ ಕ್ಷೇತ್ರದ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಬಿಡೆನ್ ಘೋಷಿಸಿದ್ದಾರೆ. ಕಪ್ಪು ಜನರ ಮತಗಳನ್ನು ಆಕರ್ಷಿಸುವಲ್ಲಿ ಬಿಡೆನ್ ಅವರ ಈ ನಿರ್ಧಾರ ಮಹತ್ವದ್ದಾಗಲಿದೆ ಎಂದು ಹೇಳಲಾಗಿದೆ. ಬಿಡೆನ್ ಅವರ ಈ ನಿರ್ಧಾರವೇ ತಮಿಳುನಾಡಿನ ಪೈಂಗಾಡು ತುಲಸೇಂದ್ರಪುರಂ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಲು ಕಾರಣವಾಗಿದೆ.
ಹ್ಯಾರಿಸ್ ಕುಟುಂಬಸ್ಥರು ಪೂಜಿಸುತ್ತಾ ಬರುತ್ತಿದ್ದ ದೇಗುಲ ಕಮಲಾ ಹ್ಯಾರಿಸ್ ಅವರ ಅಜ್ಜಿ(ತಾಯಿಯ ತಾಯಿ) ಇದೇ ಗ್ರಾಮದವರು. ಹೀಗಾಗಿ ನಮ್ಮೂರಿನ ಹೆಣ್ಣು ಮಗಳು ಅಮೆರಿಕದಲ್ಲಿ ಉನ್ನತ ಸ್ಥಾನಕ್ಕೇರುತ್ತಿರುವುದು ಹೆಮ್ಮೆ ಹಾಗೂ ಸಂತಸದ ವಿಷಯವೆಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮಕ್ಕೆ ಪ್ರವೇಶಿಸುವ ರಸ್ತೆಗಳ ಬದಿಯಲ್ಲಿ ಕಮಲಾ ಹ್ಯಾರಿಸ್ಗೆ ಶುಭಕೋರಿರುವ ಫ್ಲೆಕ್ಸ್ ಹಾಗೂ ಬ್ಯಾನರ್ಗಳು ರಾರಾಜಿಸುತ್ತಿವೆ. ಹ್ಯಾರಿಸ್ ನಮ್ಮ ಮಣ್ಣಿನ ಹೆಮ್ಮೆಯ ಮಗಳು ಎಂದೇ ಈ ಗ್ರಾಮದ ಪ್ರತಿಯೊಬ್ಬರು ಉದ್ಘರಿಸುತ್ತಿದ್ದಾರೆ.
ಪೈಂಗಾಡು ತುಲಸೇಂದ್ರಪುರಂ ಗ್ರಾಮದಲ್ಲಿ ಸಂಭ್ರಮ ಹ್ಯಾರಿಸ್ ಅವರ ತಾತ ವಿ.ಟಿ.ಗೋಪಾಲನ್, ಸರ್ಕಾರಿ ಹುದ್ದೆಯಲ್ಲಿದ್ದರು. ಅವರ ಅಜ್ಜಿ ರಾಜಮ್ ಕೂಡಾ ಇದೇ ಗ್ರಾಮದ ನಿವಾಸಿ. ಇದೇ ಗ್ರಾಮದಲ್ಲಿ ಹ್ಯಾರಿಸ್ ಅವರ ಪೂರ್ವಜರ ಮನೆಯೂ ಇದೆ. ಅವರ ಕುಟುಂಬ ಆರಾಧಿಸುತ್ತಾ ಬಂದಿದ್ದ ದೇವಾಲಯವೂ ಇದೆ. ಸದ್ಯ ಹ್ಯಾರಿಸ್ ಅವರು ಸಪ್ತಸಾಗರದಾಚೆಗಿನ ದೇಶದಲ್ಲಿ ಉನ್ನತ ಸ್ಥಾನಕ್ಕೇರುತ್ತಿರುವುದು ಅವರ ಕುಟುಂಬಸ್ಥರು ಹಾಗೂ ಗ್ರಾಮದವರಿಗೆ ಎಲ್ಲಿಲ್ಲದ ಸಂತಸ ತರಿಸಿದೆ.