ಚೆನ್ನೈ(ತಮಿಳುನಾಡು): ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಗುಡುಗಿದ್ದಾರೆ. ಶಾ, ಸಾಮ್ರಾಟ್, ಸುಲ್ತಾನ್ ಯಾರೇ ಬಂದ್ರೂ ಈ ದೇಶದ ಏಕತೆಯನ್ನ ಒಡೆಯೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿರುವ ಕಮಲ್ ಹಾಸನ್, ಕೇಂದ್ರ ಸರ್ಕಾರಕ್ಕೆ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ. ವಿವಿಧತೆಯಲ್ಲಿ ಏಕತೆ ಎಂಬ ಶಪಥ ತೊಟ್ಟು ಭಾರತವನ್ನ ಗಣರಾಜ್ಯವಾಗಿ ಮಾಡಲಾಯಿತು. ಈಗ ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ್ ಈ ಶಪಥ ಮುರಿಯಲು ಸಾಧ್ಯವಿಲ್ಲ.
ನಾವು ಎಲ್ಲಾ ಭಾಷೆಯನ್ನ ಗೌರವಿಸುತ್ತೇವೆ. ಆದರೆ, ತಮಿಳು ನಮ್ಮ ಮಾತೃ ಭಾಷೆ. ಜಲ್ಲಿಕಟ್ಟು ಕೇವಲ ಪ್ರತಿಭಟನೆ ಮಾತ್ರ, ನಮ್ಮ ಭಾಷೆಯ ಹೋರಾಟ ಅದಕ್ಕಿಂತಲೂ ಉಘ್ರವಾಗಿರುತ್ತದೆ. ಆದರೆ, ಭಾರತ ಮತ್ತು ತಮಿಳುನಾಡಿಗೆ ಇಂತಹ ಹೋರಾಟದ ಅವಶ್ಯಕತೆ ಇಲ್ಲ. ರಾಷ್ಟ್ರದ ಬಹುಪಾಲು ಜನ ರಾಷ್ಟಗೀತೆಯನ್ನ ಅತ್ಯಂತ ಸಂತೋಷವಾಗಿ ಬೆಂಗಾಲಿ ಭಾಷೆಯಲ್ಲಿ ಹಾಡುತ್ತಾರೆ. ಯಾಕೆಂದರೆ, ಕವಿ ದೇಶದ ಎಲ್ಲಾ ಭಾಷೆ ಮತ್ತು ಸಂಸ್ಕೃತಿಗೆ ಸಮಾನ ಗೌರವ ನೀಡಿ ಗೀತೆಯನ್ನ ರಚನೆ ಮಾಡಿದ್ದಾರೆ. ಹಾಗಾಗಿ ಇದು ರಾಷ್ಟ್ರಗೀತೆಯಾಗಿದೆ.
ಎಲ್ಲರನ್ನೊಳಗೊಂಡ ಭಾರತವನ್ನ ಪ್ರತ್ಯೇಕ ಭಾರತವಾಗಿ ಮಾಡಬೇಡಿ. ಹಿಂದಿ ಹೇರಿಕೆಯಂತ ಮೂರ್ಖ ನಿರ್ಧಾರದಿಂದ ಪ್ರತಿಯೊಬ್ಬರೂ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ವಿಡಿಯೋದಲ್ಲಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.