ನವದೆಹಲಿ: ಲೋಕಪಾಲರನ್ನು ನೇಮಿಸಬೇಕೆಂಬ ಕೂಗಿಗೆ ಚುನಾವಣೆ ಹೊಸ್ತಿಲಲ್ಲೇ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ಲೋಕಪಾಲರನ್ನಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಧಿಕೃತವಾಗಿ ನೇಮಕ ಮಾಡಿದ್ದಾರೆ.
ಲೋಕಪಾಲ ಸಂಸ್ಥೆಗೆ ನ್ಯಾಯಾಂಗೀಯ ಸದಸ್ಯರನ್ನಾಗಿ ನ್ಯಾ.ದಿಲೀಪ್ ಬಿ ಭೋಸಲೆ, ನ್ಯಾ. ಪಿಕೆ ಮೊಹಾಂತಿ, ನ್ಯಾ. ಅಭಿಲಾಶ ಕುಮಾರಿ ಹಾಗೂ ಎಕೆ ತ್ರಿಪಾಠಿ ಅವರನ್ನು ನೇಮಕ ಮಾಡಲಾಗಿದೆ. ಇನ್ನು ದಿನೇಶ್ ಕುಮಾರ್ ಜೈನ್, ಅರ್ಚನಾ ರಾಮಸುಂದರಂ, ಮಹೇಂದರ್ ಸಿಂಗ್ ಹಾಗೂ ಡಾ. ಐಪಿ ಗೌತಮ್ರನ್ನು ಸಂಸ್ಥೆಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಕಳೆದ ಭಾನುವಾರ ಲೋಕಪಾಲ್ ಆಯ್ಕೆ ಸಮಿತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಜೆಐ ರಂಜನ್ ಗೊಗಯಿ, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ನ್ಯಾಯಾಂಗ ತಜ್ಞ ಮುಕುಲ್ ರೋಹ್ಟಗಿ ಭಾಗವಹಿಸಿದ್ದರು. ವಿಶೇಷ ಅತಿಥಿಯಾಗಿ ನಾನು ಸಭೆಯ ಹೋಗಲ್ಲ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಧಾನ ಹೊರಹಾಕಿದ್ದರು.
ಭ್ರಷ್ಟಾಚಾರ ನಿರ್ಮೂಲನೆಗಾಗಿ ಲೋಕಪಾಲ್ ಸಂಸ್ಥೆ ಅಸ್ತಿತ್ವಕ್ಕೆ ತರಬೇಕೆಂದು ಗಾಂಧಿವಾದಿ ಅಣ್ಣಾ ಹಜಾರೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದು, ಜಗತ್ತಿನೆಲ್ಲೆಡೆ ಸುದ್ದಿಯಾಗಿತ್ತು. ಆನಂತರ ಲೋಕಪಾಲ್ಗಾಗಿ ಭಾರಿ ಹೋರಾಟಗಳು ನಡೆದವು. ಇದರ ಪ್ರತಿಫಲವಾಗಿ ಲೋಕಪಾಲ್ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತಾದರೂ, ಲೋಕಪಾಲರ ನೇಮಕಾತಿ ನೆನೆಗುದಿಗೆ ಬಿದ್ದಿತ್ತು. ಇತ್ತೀಚೆಗಷ್ಟೆ ಲೋಕಪಾಲ ನೇಮಕಾತಿಗಾಗಿ ಮತ್ತೆ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಚುನಾವಣೆಯ ಹೊಸ್ತಿಲಲ್ಲಿ ಇರುವಾಗಲೇ ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡು, ಲೋಕಪಾಲ ನೇಮಕಾತಿಗೆ ಅನುಮೋದನೆ ನೀಡಿದೆ.