ನಾವೆಲ್ಲರೂ ವ್ಯಾಪಕವಾಗಿ ಬಳಸುತ್ತಿರುವ ಸೋಶಿಯಲ್ ಮೀಡಿಯಾ ದಿನಾಚರಣೆಯನ್ನು ಸಹ ವಿಶ್ವಾದ್ಯಂತ ಆಚರಿಸಲಾಗುತ್ತದೆ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಪ್ರತಿವರ್ಷ ಜೂನ್ 30 ರಂದು ಸಾಮಾಜಿಕ ಜಾಲತಾಣಗಳ ಶಕ್ತಿ, ಸಾಮರ್ಥ್ಯದ ಪ್ರತೀಕವಾಗಿ ಸೋಶಿಯಲ್ ಮೀಡಿಯಾ ದಿನವನ್ನಾಗಿ ಆಚರಿಸಲಾಗುತ್ತದೆ.
ಜಗತ್ತಿನ ಪ್ರಖ್ಯಾತ ಜಾಲತಾಣ ಮಾಶೇಬಲ್ 2010 ರಲ್ಲಿ ಪ್ರಥಮ ಬಾರಿಗೆ ಸೋಶಿಯಲ್ ಮೀಡಿಯಾ ದಿನ ಆಚರಿಸುವ ಕರೆ ನೀಡಿತ್ತು. ನಮ್ಮ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿರುವ ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಇಡೀ ಜಗತ್ತನ್ನೇ ಬೆರಳಿನ ತುದಿಗೆ ತಂದು ನಿಲ್ಲಿಸಿದ ಸೋಶಿಯಲ್ ಮೀಡಿಯಾದ ಕೊಡುಗೆಯನ್ನು ಸಂಭ್ರಮಿಸಲು ಈ ದಿನ ಮೀಸಲಾಗಿದೆ. ಕುಟುಂಬ, ಗೆಳೆಯರು, ಸಹೋದ್ಯೋಗಿಗಳನ್ನು ಬೆಸೆಯುವ ಹಾಗೂ ಪರಿಚಯವಿಲ್ಲದವರನ್ನೂ ಗೆಳೆಯರನ್ನಾಗಿ ಮಾಡುವ ಸೋಶಿಯಲ್ ಮೀಡಿಯಾ ಇಂದು ಜಗತ್ತಿನ ಅತಿ ಪರಿಣಾಮಕಾರಿ ಸಂಪರ್ಕ ಮಾಧ್ಯಮವಾಗಿದೆ.
1980 ರಿಂದ 1990 ರ ಮಧ್ಯದ ಅವಧಿಯಲ್ಲಿ ಇಂಟರ್ನೆಟ್ನ ವ್ಯಾಪ್ತಿ ವಿಶಾಲವಾಗಿ ಹರಡಲಾರಂಭಿಸಿತು. ಈ ಅವಧಿಯಲ್ಲಿ ಜಗತ್ತಿನ ವಿಶ್ವವಿದ್ಯಾಲಯಗಳು, ಕಂಪನಿಗಳು, ಸಾರ್ವಜನಿಕ ಸಂಸ್ಥೆಗಳು ಸೇರಿದಂತೆ ಬಹುತೇಕ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಇಂಟರ್ನೆಟ್ನಲ್ಲಿ ತಮ್ಮ ಇರುವಿಕೆಯನ್ನು ತೋರ್ಪಡಿಸಲಾರಂಭಿಸಿದರು. ಯಾವುದೇ ಸರ್ಕಾರಿ ಒಡೆತನದಲ್ಲಿರದ ಇಂಟರ್ನೆಟ್ ಇವತ್ತು ಬೃಹದಾಕಾರವಾಗಿ ಬೆಳೆದಿದ್ದು, 50 ಸಾವಿರ ಸಬ್ ನೆಟ್ವರ್ಕ್ಗಳು, 4 ಮಿಲಿಯನ್ ಕಂಪ್ಯೂಟರ್ ಸಿಸ್ಟಂಗಳು ಹಾಗೂ 70 ಮಿಲಿಯನ್ ಬಳಕೆದಾರರನ್ನು ಹೊಂದಿದೆ.
ನಮ್ಮ ಬಂಧು ಬಾಂಧವರು, ಗೆಳೆಯರನ್ನು ಹತ್ತಿರ ತರುವುದು ಮಾತ್ರವಲ್ಲದೇ ವಾಣಿಜ್ಯ ಜಗತ್ತಿನಲ್ಲಿ ಇಂಟರ್ನೆಟ್ ಇವತ್ತು ಕ್ರಾಂತಿಯನ್ನೇ ಮಾಡಿದೆ.
ಮನೆಬಾಗಿಲಿಗೆ ಬೇಕಾದ ವಸ್ತುಗಳನ್ನು ತಲುಪಿಸುವ ಇ-ಕಾಮರ್ಸ್ ವ್ಯವಸ್ಥೆ, ಬೆರಳ ತುದಿಯಲ್ಲಿಯೇ ಕ್ಷಣ ಕ್ಷಣದ ಸುದ್ದಿಗಳನ್ನು ತರಬಲ್ಲ ಹಾಗೂ ಅದೇ ಸಮಯಕ್ಕೆ ಜಾಹೀರಾತು ವ್ಯಾಪಾರವನ್ನು ಎಷ್ಟೋ ಪಟ್ಟು ವಿಸ್ತಾರ ಮಾಡಿದ ಇಂಟರ್ನೆಟ್ ಸಾಮರ್ಥ್ಯ ಎಷ್ಟು ಹೇಳಿದರೂ ಕಡಿಮೆಯೇ. ಇದೆಲ್ಲ ಘಟಿಸಬೇಕಾದರೆ ಸೋಶಿಯಲ್ ಮೀಡಿಯಾ ಮಾಧ್ಯಮವೇ ಕಾರಣ ಎಂಬುದರಲ್ಲಿ ಸಂಶಯವೇ ಇಲ್ಲ. ಇವತ್ತು ಸೋಶಿಯಲ್ ಮೀಡಿಯಾ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಅಸಾಧ್ಯ!
ಸೋಶಿಯಲ್ ಮೀಡಿಯಾ; ಕೆಲ ಅಂಕಿ ಸಂಖ್ಯೆಗಳು
* ಇಂದು ಜಗತ್ತಿನಲ್ಲಿ 3.81 ಬಿಲಿಯನ್ಗೂ ಅಧಿಕ ಸಕ್ರಿಯ ಸೋಶಿಯಲ್ ಮೀಡಿಯಾ ಬಳಕೆದಾರರಿದ್ದಾರೆ.
* 2020ರ ಮೊದಲ ತ್ರೈಮಾಸಿಕದಲ್ಲಿರುವಂತೆ ವಿಶ್ವದಲ್ಲಿ 2.6 ಬಿಲಿಯನ್ಗೂ ಅಧಿಕ ಜನ ಫೇಸ್ಬುಕ್ ಬಳಸುತ್ತಿದ್ದಾರೆ.
* ಫೇಸ್ಬುಕ್ 500 ಮಿಲಿಯನ್ಗೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ.