ಹೈದರಾಬಾದ್:ಇಂದು ಹಿಂದಿ ದಿವಸ್ ಆಚರಿಸಲಾಗುತ್ತಿದೆ.ಹಿಂದಿ ಭಾಷೆ ಸ್ವತಂತ್ರ ಭಾರತದ ಭಾಷೆಯಾಗಿರಬೇಕು ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ 1925ರ ಕರಾಚಿ ಅಧಿವೇಶನದಲ್ಲಿ ನಿರ್ಧರಿಸಿತು.
ಅಧಿಕೃತ ಭಾಷೆಯಾಗಿ:
ಹಿಂದಿ ಭಾಷೆಯನ್ನು ಭಾರತದ ಅಧಿಕೃತ ಭಾಷೆಯಾಗಿ ಸೆಪ್ಟೆಂಬರ್ 14, 1949ರಂದು ಪಟ್ಟಿ ಮಾಡಲಾಯಿತು. ಅಂದಿನಿಂದ ಈ ದಿನವನ್ನು ಹಿಂದಿ ದಿವಸ್ ಎಂದು ಸ್ಮರಿಸಲಾಗುತ್ತದೆ. ಹಿಂದಿ ಮತ್ತು ಇಂಗ್ಲಿಷ್ ಭಾರತೀಯ ಕೇಂದ್ರ ಸರ್ಕಾರಕ್ಕೆ ಎರಡು ಅಧಿಕೃತ ಭಾಷೆಗಳಾದರೆ, ಸಂವಿಧಾನವು ಒಟ್ಟು 22 ಭಾಷೆಗಳನ್ನು ಗುರುತಿಸುತ್ತದೆ.
ಇತಿಹಾಸ:
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ 1925ರ ಕರಾಚಿ ಅಧಿವೇಶನದಲ್ಲಿ ಹಿಂದಿ ಸ್ವತಂತ್ರ ರಾಷ್ಟ್ರ ಹಿಂದೂಸ್ತಾನದ ಭಾಷೆಯಾಗಿರಬೇಕು ಎಂದು ನಿರ್ಧರಿಸಿತು. ಆದರೆ ಕೆಲವು ವರ್ಷಗಳ ನಂತರ ಈ ನಿರ್ಣಯವನ್ನು ಮಾರ್ಪಡಿಸಲಾಯಿತು. ಹಿಂದಿ ರಾಷ್ಟ್ರದ ಅಧಿಕೃತ ಭಾಷೆಯಾಗಿರಬೇಕು ಎಂದು ಸೂಚಿಸಿತು.
ಅದಾದ ಬಳಿಕ ಭಾರತದ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಭಾಷೆಯನ್ನು ಅಳವಡಿಸಬೇಕೆಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಹಿಂದಿ ಭಾರತದ ಅಧಿಕೃತ ಭಾಷೆಯಾಗಬೇಕೆಂದು ಒತ್ತಾಯಿಸಿದರು. ಅಂತಿಮವಾಗಿ ಹಿಂದಿ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಘೋಷಿಸಲಾಯಿತು.
ಎನ್‌ಡಿಎ ಸರ್ಕಾರದ ಅಡಿಯಲ್ಲಿ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಹಿಂದಿ ಬಳಕೆಯನ್ನು ಉತ್ತೇಜಿಸುವ ಪ್ರಯತ್ನಗಳೊಂದಿಗೆ ಹೊಸ ವಿವಾದಗಳನ್ನು ಕೂಡ ಎದುರಿಸುತ್ತಿದೆ. ಹಿಂದಿ ಭಾಷೆಯನ್ನು ಬಳಸದ ಪ್ರದೇಶಗಳಲ್ಲಿ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತವಾಗಿದೆ.
ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮತ್ತು ಸರ್ಕಾರಿ ಪತ್ರಗಳಲ್ಲಿ ಹಿಂದಿ ಬಳಸುವಂತೆ ಸರ್ಕಾರ 2014ರಲ್ಲಿ ತನ್ನ ಅಧಿಕಾರಿಗಳಿಗೆ ಆದೇಶಿಸಿತ್ತು. ಪ್ರಧಾನಿ ಮೋದಿ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರೂ ಜಾಗತಿಕ ನಾಯಕರೊಂದಿಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಜತಾಂತ್ರಿಕತೆ ನಡೆಸಲು ಹಿಂದಿ ಭಾಷೆಯನ್ನೇ ಆಯ್ಕೆ ಮಾಡಿದ್ದಾರೆ.
ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಎಲ್ಲಾ ಗಣ್ಯರು ಮತ್ತು ಮಂತ್ರಿಗಳು ಕಡ್ಡಾಯವಾಗಿ ಹಿಂದಿಯಲ್ಲಿ ತಮ್ಮ ಭಾಷಣ ನೀಡಬೇಕು ಎಂಬ ಕೇಂದ್ರ ಸರ್ಕಾರದ ಸಲಹೆಗೆ ಅನುಮತಿ ನೀಡಿದ್ದರು.