ಗಾಜಿಯಾಬಾದ್ (ಉತ್ತರ ಪ್ರದೇಶ):ದುಷ್ಕರ್ಮಿಗಳ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಪತ್ರಕರ್ತ ವಿಕ್ರಮ್ ಜೋಷಿ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಜುಲೈ 20ರ ರಾತ್ರಿ ಗಾಜಿಯಾಬಾದ್ನ ವಿಜಯ್ನಗರ ಪ್ರದೇಶದಲ್ಲಿ ಕೆಲವು ದುಷ್ಕರ್ಮಿಗಳು ಪತ್ರಕರ್ತ ವಿಕ್ರಮ್ ಜೋಶಿಯ ತಲೆಗೆ ಗುಂಡು ಹಾರಿಸಿ, ಪರಾರಿಯಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ವಿಕ್ರಮ್ ಜೋಷಿ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಗುಂಡಿನ ದಾಳಿಗೊಳಗಾದ ಪತ್ರಕರ್ತ ಸಾವು ಈ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿ ರವಿ ಸೇರಿದಂತೆ, ಛೋಟು, ಮೋಹಿತ್, ದಲ್ವೀರ್, ಆಕಾಶ್, ಯೋಗೇಂದ್ರ, ಅಭಿಷೇಕ್ ಹಕ್ಲಾ, ಅಭಿಷೇಕ್ ಮೋಟಾ, ಶಕೀರ್ ಹೆಸರಿನ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಅಶೋಕ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ನಾದಿನಿಯೊಂದಿಗೆ ಕಿರಿಕಿರಿ ವಿಚಾರ ಕೊಲೆಯಲ್ಲಿ ಅಂತ್ಯವಾಯ್ತಾ..?
ತನ್ನ ನಾದಿಯನ್ನು ಕೆಲವುರು ಚುಡಾಯಿಸಿದರೆಂಬ ಕಾರಣಕ್ಕೆ ಪತ್ರಕರ್ತ ವಿಕ್ರಮ್ ಜೋಷಿ ವಿಜಯನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ವಿಕ್ರಮ್ ಜೋಷಿಯ ಹತ್ಯೆ ನಡೆದಿದೆ ಎಂದು ಪತ್ರಕರ್ತನ ಸಹೋದರ ಅನಿಕೇತ್ ಜೋಷಿ ಹೇಳಿದ್ದಾರೆ.
ಪತ್ರಕರ್ತನ ಮನೆಯ ಎದುರಿನಲ್ಲೇ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾವುದೇ ಕ್ರಮ ಕೈಗೊಳ್ಳದ ಆರೋಪದಲ್ಲಿ ಈಗ ವಿಜಯನಗರ್ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಅಮಾನತು ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಆರೋಪಿ ರವಿ ಹಾಗೂ ಕೆಲವರು ನನ್ನ ತಂಗಿಯನ್ನು ಚುಡಾಯಿಸಿದ್ದರು. ಆಕೆ ಹುಟ್ಟು ಹಬ್ಬದ ದಿನ ನಮ್ಮ ಅಂಕಲ್ ಆಕೆಯೊಂದಿಗೆ ಮನೆಯಿಂದ ಹೊರಗಡೆ ಬಂದಿದ್ದಾಗ ಅವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ನಮ್ಮ ಅಂಕಲ್ನ ಶವ ಆಸ್ಪತ್ರೆಯಲ್ಲಿದ್ದು, ಆರೋಪಿಗಳನ್ನು ಹಿಡಿಯುವವರೆಗೆ ನಾವು ಮೃತದೇಹ ಪಡೆಯುವುದಿಲ್ಲ ಎಂದು ವಿಕ್ರಮ್ ಸಹೋದರನ ಮಗ ಸ್ಪಷ್ಟಪಡಿಸಿದ್ದರು.
'ಉತ್ತರ'ದ ವಿಚಾರಕ್ಕೆ 'ಪಶ್ಚಿಮ'ದ ಪ್ರತಿಕ್ರಿಯೆ..!
ಪತ್ರಕರ್ತನ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ '' ಈ ಘಟನೆಯಿಂದ ನನಗೆ ಆಘಾತವಾಗಿದೆ. ವಿಕ್ರಮ್ ಜೋಷಿ ಭಯವಿಲ್ಲದ ಪತ್ರಕರ್ತರಾಗಿದ್ದರು. ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಕ್ಕೆ ಕೊಲೆಯಾಗಿದೆ. '' ಎಂದು ಟ್ವೀಟ್ ಮಾಡಿದ್ದಾರೆ.
''ವಾದಾ ತಾ ರಾಮ್ ರಾಜ್ ಕಾ, ದೇ ದಿಯಾ ಗೂಂಡಾ ರಾಜ್..!''
ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೂ ಪ್ರತಿಕ್ರಿಯೆ ನೀಡಿದ್ದು, ''ವಾದಾ ತಾ ರಾಮ್ ರಾಜ್ ಕಾ, ದೇ ದಿಯಾ ಗೂಂಡಾ ರಾಜ್'' ( ರಾಮರಾಜ್ಯ ಕೊಡುತ್ತೇನೆ ಎಂದು ಹೇಳಿ ಗೂಂಡಾ ರಾಜ್ಯ ಕೊಟ್ಟರು) ಎಂದು ಉತ್ತರ ಪ್ರದೇಶ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಿಕ್ರಮ್ ಜೋಷಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಈಗ ಉತ್ತರ ಪ್ರದೇಶದ ಹಲವೆಡೆ ಹಾಗೂ ಗಾಜಿಯಾಬಾದ್ನಲ್ಲಿ ಪತ್ರಕರ್ತನ ಕೊಂದ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ.