ಜೈಪುರ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಗೆ ಹಾಜರಾಗದಿದ್ದರೆ ಬೇಲ್ ರದ್ದುಗೊಳಿಸುವುದಾಗಿ ಜೋಧ್ಪುರ್ ಕೋರ್ಟ್ ಸಲ್ಮಾನ್ ಖಾನ್ಗೆ ಎಚ್ಚರಿಕೆ ನೀಡಿದೆ.
1998 ರಲ್ಲಿ 'ಹಮ್ ಸಾಥ್ ಸಾಥ್ ಹೈ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಜೋಧ್ಪುರ್ ಕಂಕಣಿ ಗ್ರಾಮದ ಬಳಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿ 5 ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿತ್ತು. ಆದರೆ 2018 ರಲ್ಲಿ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಲ್ಮಾನ್ ಖಾನ್ ಹಾಗೂ ಕೃಷ್ಣಮೃಗ ಬೇಟೆ ವೇಳೆ ಅವರೊಂದಿಗೆ ಇದ್ದ ಟಬು, ಸೈಫ್ ಅಲಿ ಖಾನ್, ನೀಲಂ, ಸೋನಾಲಿ ಬೇಂದ್ರೆ, ದುಷ್ಯಂತ್ ಸಿಂಹ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ಐವರನ್ನೂ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿತ್ತು.
ಈ ತೀರ್ಪಿನ ವಿರುದ್ಧ ರಾಜಸ್ಥಾನ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ನಂತರ ಮತ್ತೆ ವಿಚಾರಣೆ ನಡೆಸಿದ ಜೋಧ್ಪುರ್ ಕೋರ್ಟ್ 2019 ಮೇ ತಿಂಗಳಲ್ಲಿ ಈ ಐವರಿಗೂ ಹೊಸದಾಗಿ ನೋಟೀಸ್ ನೀಡಿತ್ತು. ಆದರೆ ಸಲ್ಮಾನ್ ಖಾನ್ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾರಣ ಮುಂದಿನ ವಿಚಾರಣೆಗೆ ಕೋರ್ಟ್ಗೆ ಹಾಜರಾಗದಿದ್ದಲ್ಲಿ ಬೇಲ್ ರದ್ದುಗೊಳಿಸುವುದಾಗಿ ವಾರ್ನಿಂಗ್ ಮಾಡಿದೆ.
ಕಳೆದ ವರ್ಷ ಟ್ರೈಲ್ ಕೋರ್ಟ್ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿತ್ತು. ಈ ಬಗ್ಗೆ ಮಾತನಾಡಿದ್ದ ಸಲ್ಮಾನ್ ಖಾನ್ ಪರ ವಕೀಲ ಆನಂದ್ ದೇಸಾಯಿ, ನಾವು ಘನ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಆದರೆ ಕೋರ್ಟ್ ತೀರ್ಪು ನಮ್ಮನ್ನ ಚಕಿತಗೊಳಿಸಿದೆ. ಎರಡು ಕೇಸ್ಗಳಲ್ಲಿ ರಾಜಸ್ಥಾನ ಹೈಕೋರ್ಟ್ ಎಲ್ಲ ಸಾಕ್ಷಿಗಳನ್ನ ಕೂಲಂಕಷವಾಗಿ ವಿಚಾರಣೆ ಮಾಡಿ ನಿರ್ದೋಷಿ ಎಂದು ತೀರ್ಪು ನೀಡಿತ್ತು. ಹೀಗಾಗಿ ಆ ತೀರ್ಪನ್ನು ನಾವು ಕೂಲಂಕಷವಾಗಿ ನೋಡ್ತೇವಿ ಎಂದು ಹೇಳಿದ್ದರು. ಆ ಬಳಿಕ ಸಲ್ಮಾನ್ಖಾನ್ ಬೇಲ್ ಸಹ ಪಡೆದಿದ್ದರು.