ಹೈದರಾಬಾದ್: ಕೇಂದ್ರ ಬಜೆಟ್ಗೆ ಕ್ಷಣಗಣನೆ ಆರಂಭವಾಗಿದೆ. ಈ ಕುರಿತು ದೇಶದ ಜನರು ಕಾತುರರಾಗಿದ್ದು, ಉದ್ಯೋಗಾವಕಾಶ ಸೃಷ್ಟಿಸುವ ಸವಾಲು ಸರಕಾರದ ಮುಂದಿದೆ. ಅದರಲ್ಲೂ ಹೊಸ ಹಣಕಾಸು ಸಚಿವರಿಗೆ ಇದೊಂದು ಸವಾಲು ಕೂಡಾ ಹೌದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತಲ್ಲಣ, ಆರ್ಥಿಕ ಕುಸಿತದ ಭೀತಿ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
ಭಾರತದ ನಿರುದ್ಯೋಗ ಪ್ರಮಾಣವು ಜೂನ್ 2019ರ ಪ್ರಕಾರ ಶೇ. 8.1ರಷ್ಟಿದೆ. ಕಳೆದೆರಡು ವರ್ಷದಲ್ಲಿ ಸುಮಾರು 47 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೆಂದ್ರ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ದೇಶದ ಶೇ 68 ರಷ್ಟಯ ನಿರುದ್ಯೋಗಿಗಳು 20 ರಿಂದ 29 ವರ್ಷದವರಾಗಿದ್ದಾರೆ ಎನ್ನುವುದು ಆತಂಕದ ವಿಚಾರ. ದೇಶದ ನಿರುದ್ಯೋಗ ಸಮಸ್ಯೆಗಳ ಹಿಂದಿರುವ ಕಾರಣಗಳನ್ನು ಗುರುತಿಸಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಇದು ಸೂಕ್ತ ಸಮಯ.
ಬೆಳವಣಿಗೆ ಕುಂಠಿತ:
ಇತ್ತೀಚಿನ ವರದಿಗಳ ಪ್ರಕಾರ ಭಾರತದ ಅರ್ಥವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ. ಆದರೆ, ದೇಶದ ಅಭಿವೃದ್ಧಿಯೊಂದಿಗೆ ಬೇಕಾದಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ.
ಕೃಷಿ ಕ್ಷೇತ್ರದ ಉತ್ಪಾದನೆ ಕೂಡಾ ನಿಧಾನಗತಿಯಲ್ಲಿ ಸಾಗುತ್ತಿದೆ. 2017-18ರಲ್ಲಿ ಶೇ. 5ರಷ್ಟಿದ್ದ ಕೃಷಿ ಕ್ಷೇತ್ರದ ಬೆಳವಣಿಗೆ 2018-19ರಲ್ಲಿ 2.9 ಶೇಕಡಾಕ್ಕೆ ಇಳಿದಿದೆ. 2011-12ರಲ್ಲಿ 58.9 ಮಿಲಿಯನ್ ಇದ್ದ ಉತ್ಪಾದನಾ ಕ್ಷೇತ್ರದ ಉದ್ಯೋಗಾವಕಾಶ, 2015-16ರಲ್ಲಿ 48.3 ಮಿಲಿಯನ್ಗೆ ಇಳಿದಿದೆ. ಸೇವಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಇದ್ದರೂ, ರಫ್ತು ಕಡಿಮೆಯಾಗುತ್ತಿರುವುದರಿಂದ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ.