ನವದೆಹಲಿ:ಜೆಎನ್‌ಯು ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರ ತನಿಖೆಯನ್ನು 'ಬೋಗಸ್' ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ.
ಈ ಬಗ್ಗೆ ಮಾತನಾಡಿರುವ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಸದಸ್ಯರೊಬ್ಬರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುದ್ದಿಗೋಷ್ಠಿಯಂತೆ ಕಾಣಿಸಿಕೊಂಡ ದೆಹಲಿ ಪೊಲೀಸರ ಸುದ್ದಿಗೋಷ್ಠಿಯ ಬಗ್ಗೆ ಮಾತನಾಡಲು ನಾವು ಇಲ್ಲಿದ್ದೇವೆ. ಪೊಲೀಸರು ಎಬಿವಿಪಿ ಬರೆದ ಕಾಗದವನ್ನು ಓದುತ್ತಿರುವಂತೆ ತೋರುತ್ತಿದೆ. ಈ ಪ್ರಕರಣದಲ್ಲಿ ದೆಹಲಿ ಪೊಲೀಸರ ತನಿಖೆ ಬೋಗಸ್ ಎಂದು ಆರೋಪಿಸಿದ್ದಾರೆ.
ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಸುದ್ದಿಗೋಷ್ಠಿ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಕಾಲೇಜು ಆಡಳಿತ ಮತ್ತು ಪೊಲೀಸರು ಇಬ್ಬರೂ ಸಹಕರಿಸಿದ್ದಾರೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ. 'ಹಿಂಸಾಚಾರದಲ್ಲಿ ಎಬಿವಿಪಿ ಭಾಗಿಯಾಗಿದೆ ಎಂದು ಹಲವಾರು ಮಾಧ್ಯಮ ಸಂಸ್ಥೆಗಳ ವೀಡಿಯೊಗಳಿಂದ ಸಾಬೀತಾಗಿದೆ. ಪೊಲೀಸರು ಮತ್ತು ಜೆಎನ್‌ಯು ಆಡಳಿತವು ಇದಕ್ಕೆ ಬೆಂಬಲ ನೀಡಿದೆ. ನಕಲಿ ಫೊಟೋಗಳು ಮತ್ತು ವಿಡಿಯೋಗಳು ಹರಿದಾಡುತ್ತಿವೆ. ಇದು ಜೆಎನ್‌ಯುಗೆ ಬೆದರಿಕೆ ಹಾಕುವ ಯೋಜಿತ ಪಿತೂರಿ' ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್ ಅಪರಾಧ ವಿಭಾಗವು ಶುಕ್ರವಾರ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಆಯಿಷಾ ಘೋಷ್ ಸೇರಿದಂತೆ ಒಂಬತ್ತು ಮಂದಿ ಶಂಕಿತರ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಇನ್ನೂ ಯಾವುದೇ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿಲ್ಲ. ಆದರೆ ಶಂಕಿತರನ್ನು ವಿಚಾರಣೆ ನಡೆಸುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಪೊಲೀಸರು ತಿಳಿಸಿದ್ದರು.