ನವದೆಹಲಿ: ಬಿಜೆಪಿ ನಾಯಕ ಸಂಬೀತ್ ಪಾತ್ರ ಟ್ವಿಟ್ಟರ್ನಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು ಅದರಲ್ಲಿ ಪ್ರತಿಭಟನಾಕಾರರು ಜಿನ್ನಾ ಪರ ಘೋಷಣೆ ಕೂಗುತ್ತಿದ್ದು, ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ನವದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ತೆಗೆದ ವಿಡಿಯೋ ಎಂದು ಹೇಳಲಾಗುತ್ತಿದ್ದು, ವಿಡಿಯೋದಲ್ಲಿ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿಲ್ಲ. ಆದ್ರೆ 'ಗಾಂಧಿ ವಾಲಿ ಆಜಾದಿ', 'ನೆಹರು ವಾಲಿ ಆಜಾದಿ', 'ಜಿನ್ನಾ ವಾಲಿ ಆಜಾದಿ' ಎಂದು ಘೋಷಣೆ ಕೂಗುತ್ತಿರುವುದು ಸ್ಪಷ್ಟವಾಗಿ ಕೇಳಬಹುದು.
ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಸ್ನೇಹಿತರೇ, ಈಗ ಏನು ಹೇಳಲು ಉಳಿದಿದೆ? ಇದು ಹಿಂದೂಸ್ತಾನ್ ಪರ ಇದೆಯೋ ಅಥವಾ ಹಿಂದೂಸ್ತಾನ್ ವಿರುದ್ಧ ಇದೆಯೋ ಎಂದು ಚರ್ಚಿಸುವ ಅಗತ್ಯವಿದೆಯೇ? ನಾವು ಹೋರಾಡಬೇಕಿರುವುದು ಹೊರಗಿರುವವರ ವಿರುದ್ಧವೋ? ನಮ್ಮಲೇ ಇರುವವರ ವಿರುದ್ಧವೋ? ದೇಶದ್ರೋಹಿಗಳು ನಮ್ಮಲ್ಲೇ ಇದ್ದರೆ ನೀವೇನು ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಹಿಂಸಾಚಾರವನ್ನು ಪ್ರತಿಪಾದಿಸುವ ಜಿನ್ನಾ ಪರ ಘೋಷಣೆ ಕೂಗಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ದುರದೃಷ್ಟವಶಾತ್ ಆಡಳಿತ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಕೆಲವು ಜನರಿಗೆ ವಿಡಿಯೊಗಳನ್ನು ಬಿಡುಗಡೆ ಮಾಡುವ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ನಾವು ನೋಡಿದ್ದೇವೆ. ಅದರಲ್ಲಿರುವ ಸತ್ಯಾಸತ್ಯತೆ ಬಗ್ಗೆ ಅನುಮಾನವಿದೆ ಎಂದಿದ್ದಾರೆ.