ಘರ್ವಾ (ಜಾರ್ಖಂಡ್): ಗ್ರಾಮದ ಮಹಿಳೆಯೊಬ್ಬಳು ವಾಹನ ವ್ಯವಸ್ಥೆ ಮಾಡಲು ಹಣವಿಲ್ಲದ ಕಾರಣ ತನ್ನ 16 ವರ್ಷದ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಘಟನೆ ನಡೆದಿದೆ.
ಜಾರ್ಖಂಡ್‌ನ ಘರ್ವಾ ಜಿಲ್ಲೆಯ ಮಾಹುಲಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಗಳನ್ನು ಹೊತ್ತೊಯ್ಯಲು ಮಹಿಳೆ ಹೆಣಗಾಡುತ್ತಿರುವ ವೀಡಿಯೊ ಕ್ಲಿಪ್ ವೈರಲ್ ಆಗುತ್ತಿದೆ.
ಮಗಳನ್ನು ಹೆಗಲ ಮೇಲೆ ಹೊತ್ತು ಸಾಗಿದ ತಾಯಿ ಮೂಲಗಳ ಪ್ರಕಾರ, ರಿಂಕಿ ದೇವಿಯ ಮಗಳು ಮರದಿಂದ ಬಿದ್ದು ಕಾಲು ಮುರಿದಿತ್ತು. ಆಕೆಯ ಚಿಕಿತ್ಸೆಗಾಗಿ, ರಿಂಕಿ ತನ್ನ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಳು. ವಾಹನದ ವ್ಯವಸ್ಥೆ ಮಾಡಲು ಹಣವಿಲ್ಲದ ಕಾರಣ ಹೊತ್ತುಕೊಂಡೇ ಹೋಗಿದ್ದಾಳೆ ಎನ್ನಲಾಗಿದೆ.
“ನಾನು ನನ್ನ ಮಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದೆ. ಆದರೆ ಅಲ್ಲಿ ಅವರು ಚಿಕಿತ್ಸೆಗೆ ನಿರಾಕರಿಸಿ, ಖಾಸಗಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದು ಹೇಳಿದರು. ವಾಹನ ವ್ಯವಸ್ಥೆ ಮಾಡಲು ನನ್ನ ಬಳಿ ಹಣವಿಲ್ಲದ ಕಾರಣ ನಾನು ಅವಳನ್ನು ಹೊತ್ತುಕೊಂಡು ಖಾಸಗಿ ಆಸ್ಪತ್ರೆಗೆ ಸಾಗಿದೆ.” ಎಂದು ರಿಂಕಿ ದೇವಿ ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.