ರಾಂಚಿ (ಜಾರ್ಖಂಡ್):ಸಾಮಾಜಿಕ ಜಾಲತಾಣದಲ್ಲಿ ತನ್ನ ಹೆಸರು ಮತ್ತು ಪ್ರತಿಷ್ಠೆಗೆ ಕಳಂಕ ತಂದ ಆರೋಪದ ಮೇಲೆ ಬಿಜೆಪಿ ಸಂಸದ ಡಾ.ನಿಶಿಕಾಂತ್ ದುಬೆ ವಿರುದ್ಧ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ರಾಂಚಿ ಸಿವಿಲ್ ನ್ಯಾಯಾಲಯದಲ್ಲಿ ₹ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಆಗಸ್ಟ್ 4ರಂದು ಸಂಸದ ದುಬೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಈ ಪ್ರಕರಣದಲ್ಲಿ ಸಂಸದರೊಂದಿಗೆ, ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಫೇಸ್‌ಬುಕ್ ಇಂಡಿಯಾ ಆನ್‌ಲೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಜಾಲತಾಣದಲ್ಲಿ ಸಂಸದ ದುಬೆ ಅವರು ವಿವಿಧ ವಿಷಯಗಳ ಕುರಿತು ಹೇಮಂತ್ ಸೊರೆನ್ ವಿರುದ್ಧ ಬರೆದಿದ್ದಾರೆ. 2013ರಲ್ಲಿ ಮುಂಬೈನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಅಪಹರಣದಲ್ಲಿ ಸೊರೆನ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೊರೆನ್, ಮಾಧ್ಯಮಗಳ ಮೂಲಕ ತನ್ನೆಲ್ಲಾ ಆರೋಪಗಳಿಗೆ ಉತ್ತರಿಸುತ್ತೇನೆ ಎಂದಿದ್ದಾರೆ.
ದುಬೆ ಜುಲೈ 27ರಿಂದ ಸೊರೆನ್ ಅವರನ್ನು ಸಾರ್ವಜನಿಕ ಹಗರಣ, ದ್ವೇಷಕ್ಕೆ ಒಳಪಡಿಸುವಂತೆ ಮತ್ತು ಅವರ ಪ್ರತಿಷ್ಠೆಗೆ ಕಳಂಕ ತರುವಂತೆ ಸುಳ್ಳು ಮತ್ತು ದುರುದ್ದೇಶಪೂರಿತವಾಗಿ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಫೇಸ್‌ಬುಕ್ ಇಂಡಿಯಾ ಆನ್‌ಲೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಪ್ರತಿಷ್ಠಿತ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಪೋಸ್ಟ್ ಮಾಡುವುದನ್ನು ನಿರ್ಬಂಧಿಸಿಲ್ಲ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ. ಈ ವಿಚಾರಣೆಯನ್ನು ಆಗಸ್ಟ್ 5ರಂದು ಮಾಡಲಾಗಿದ್ದು, ಮುಂದಿನ ವಿಚಾರಣೆ ಆಗಸ್ಟ್ 22 ರಂದು ನಡೆಯಲಿದೆ.
ಆಗಸ್ಟ್ 6ರಂದು ಡಾ.ನಿಶಿಕಾಂತ್ ದುಬೆ ಅವರು ‘ಮುಖ್ಯಮಂತ್ರಿಗಳ ಮೇಲೆ ಅತ್ಯಾಚಾರ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ಮುಂಬೈನ ಕೆಲವು ಬಾಲಕಿಯರು ಪ್ರಕರಣ ದಾಖಲಿಸಿದ್ದಾರೆ. ನೀವು ಅವರ ಬದಲಿಗೆ ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೀರಿ. ಮುಖ್ಯಮಂತ್ರಿಗಳ ವಿರುದ್ಧ ಹೋರಾಡಲು ನನಗೆ ಅವಕಾಶ ಸಿಗುವಂತೆ ಮಾಡಿರುವುದಕ್ಕೆ ಧನ್ಯವಾದಗಳು' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.