ನವದೆಹಲಿ: ಲಾಕ್ಡೌನ್ ಸಮಯದಲ್ಲಿ ರೋಗಿಗಳ ಅನುಕೂಲಕ್ಕಾಗಿ ವಾಟ್ಸ್ಆ್ಯಪ್ ಹಾಗೂ ಇಮೇಲ್ ಮೂಲಕ ಜನೌಷಧಿ ಮಳಿಗೆಗಳಿಂದ ಔಷಧಿ ತರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ಸದ್ಯ ಭಾರತದ 726 ಜಿಲ್ಲೆಗಳಲ್ಲಿ ಒಟ್ಟು 6,300 ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಕಾರ್ಯನಿರ್ಹಿಸುತ್ತಿದ್ದು, ಗುಣಮಟ್ಟದ ಔಷಧಿಗಳನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ವಿತರಿಸುತ್ತಿವೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ಜನರಿಗೆ ಮತ್ತಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜನೌಷಧಿ ಕೇಂದ್ರಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ವಾಟ್ಸ್ಆ್ಯಪ್ ಹಾಗೂ ಇನ್ನಿತರ ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಆರ್ಡರ್ ಪಡೆದು, ಅಗತ್ಯವಿರುವವರಿಗೆ ತುರ್ತಾಗಿ ಔಷಧಿಗಳನ್ನು ಪೂರೈಸುತ್ತಿವೆ." ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.
ಏಪ್ರಿಲ್ 2020 ರಲ್ಲಿ 52 ಕೋಟಿ ರೂ. ಮೊತ್ತದ ಔಷಧಿಗಳನ್ನು ಜನೌಷಧಿ ಕೇಂದ್ರಗಳು ಜನರಿಗೆ ತಲುಪಿಸಿವೆ. ಭಾರತೀಯ ಅಂಚೆಯ ಸಹಯೋಗದಲ್ಲಿ ದೂರದ ಪ್ರದೇಶಗಳಿಗೂ ಶೀಘ್ರವಾಗಿ ಔಷಧಿ ಬಟವಾಡೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.