ಶ್ರೀನಗರ:ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮಸೂದ್ನ ಹತ್ಯೆ ಬಳಿಕ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯು ಭಯೋತ್ಪಾದಕ ಮುಕ್ತವಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಜಮ್ಮು- ಕಾಶ್ಮೀರದ ದೋಡಾಗೆ 'ಭಯೋತ್ಪಾದಕ ಮುಕ್ತ ಜಿಲ್ಲೆ' ಪಟ್ಟ - ದೋಡಾ
ದಕ್ಷಿಣ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮಸೂದ್ ಎಂಬಾತನನ್ನು ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎನ್ಕೌಂಟರ್ ಮಾಡಲಾಗಿದೆ. ಈತನ ಹತ್ಯೆ ಬಳಿಕ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯು ಭಯೋತ್ಪಾದಕ ಮುಕ್ತವಾಗಿದೆ ಎಂದು ಡಿಜಿಪಿ ಘೋಷಿಸಿದ್ದಾರೆ.
ಅನಂತ್‌ನಾಗ್ ಜಿಲ್ಲೆಯ ಖುಲ್‌ಚೋಹರ್ ಪ್ರದೇಶದಲ್ಲಿ ಸೋಮವಾರ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಟ್ಟು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಇವರಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರಾಗಿದ್ದು, ಇನ್ನೊಬ್ಬ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮಸೂದ್ ಹೆಸರಿನ ಉಗ್ರನಾಗಿದ್ದಾನೆ.
ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ಮಸೂದ್, ಬಳಿಕ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿಕೊಂಡಿದ್ದನು. ಈತ ದೋಡಾ ಜಿಲ್ಲೆಯಲ್ಲಿ ಉಳಿದುಕೊಂಡಿದ್ದ ಕೊನೆಯ ಉಗ್ರಗಾಮಿಯಾಗಿದ್ದನು. ಎನ್ಕೌಂಟರ್ನಲ್ಲಿ ಈತನನ್ನು ಹತ್ಯೆ ಮಾಡಲಾಗಿದೆ. ಇದೀಗ ದೋಡಾ ಭಯೋತ್ಪಾದಕ ಮುಕ್ತ ಜಿಲ್ಲೆಯಾಗಿದೆ. ಇನ್ನು ಉಗ್ರರ ಬಳಿಯಿದ್ದ ಎಕೆ 47 ರೈಫಲ್, ಎರಡು ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ನಡುವೆ ಅಳಿದುಳಿದ ಉಗ್ರರಿಗಾಗಿ ಜಂಟಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.