ಶ್ರೀನಗರ/ ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಬಿಗಿ ಭದ್ರತೆ ಹಾಗೂ ಸೆಕ್ಷನ್ 144 ಜಾರಿಗೊಳಿಸಿ ಇಲ್ಲಿನ ಜನರ ಚಲನ ವಲನದ ಮೇಲೆ ಇಟ್ಟಿದ್ದ ನಿಗವನ್ನು ಭಾಗಶಃ ತೆರವುಗೊಳಿಸಲಾಗಿದೆ.
ಶುಕ್ರವಾರ ಮುಸ್ಲಿಮರ ಪ್ರಾರ್ಥನೆ ಸಲ್ಲಿಸಲು ಅನುಕೂಲ ಆಗುವಂತೆ ವಿನಾಯಿತಿ ನೀಡಲಾಗಿದ್ದು, ಕಳೆದ ಐದು ದಿನಗಳಿಂದ ಜಾರಿಯಲ್ಲಿದ್ದ ಸೆಕ್ಷನ್ 144 ಅನ್ನು ಹಿಂದಕ್ಕೆ ಪಡೆಯಲಾಗಿದೆ. ಫೋನ್ ಮತ್ತು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಉಪ ಮ್ಯಾಜಿಸ್ಟ್ರೇಟ್ ಸುಷ್ಮಾ ಚೌಹಾನ್ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಜನರಿಗಿಂತ ಹೆಚ್ಚಿನವರು ಸೇರುವ ಸೆಕ್ಷನ್ 144 ಅನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ. ಆಗಸ್ಟ್ 10ರಿಂದ ಎಲ್ಲ ಶಾಲಾ- ಕಾಲೇಜುಗಳು ಮತ್ತೆ ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.
ಪೊಲೀಸ್ ಸರ್ಪಗಾವಲು:
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆಯುವ ಮುನ್ನ ಸಾಕಷ್ಟು ಪ್ರಮಾಣದಲ್ಲಿ ಪೊಲೀಸ್ ಮತ್ತು ಮಿಲಿಟರ್ ಪಡೆಯನ್ನು ಸರ್ಪಗಾವಲಿನಂತೆ ನಿಯೋಜಿಸಲಾಗಿತ್ತು. ಆಗಸ್ 5ರಂದು ಆರ್ಟಿಕಲ್ 370 ಮತ್ತು 35ಎ ಅನ್ನು ಹಿಂದಕ್ಕೆ ಪಡೆದು ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶ ಹಾಗೂ ಕಾಶ್ಮೀರವನ್ನು ವಿಧಾನಸಭೆ ಹೊಂದಿದ ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಹೊರಡಿಸಲಾಯಿತು.
ಮಾಜಿ ಸಿಎಂಗಳ, ರಾಜಕೀಯ ನಾಯಕರ ಗೃಹ ಬಂಧನ ಮುಂದುವರಿಕೆ:
ಕಣಿವೆ ರಾಜ್ಯದಲ್ಲಿ ಯಾವುದೇ ರೀತಿಯ ಧರಣಿ ಅಥವಾ ಪ್ರತಿಭಟನಾ ಮೆರವಣಿಗೆ ಆಗದಂತೆ ತಡೆಯಲು ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಹಾಗೂ ಒಮರ್ ಅಬ್ದುಲ್ಲಾ ಸೇರಿದಂತೆ 400ಕ್ಕೂ ಅಧಿಕ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸುವುದನ್ನು ಮುಂದುವರಿಸಲಾಗಿದೆ.
ಅಲ್ಪ ನಿಟ್ಟುಸಿರು ಬಿಟ್ಟ ಜನ:
ಕಳೆದ ಐದು ದಿನಗಳ ಕಾಲ ಮಿಲಿಟರಿ ಮತ್ತು ಪೊಲೀಸರ ಕಣ್ಗಾವಲಿನಲ್ಲಿ ದಿನ ದೂಡುತ್ತಿದ್ದ ಕಾಶ್ಮೀರಿಗರಿಗೆ ಇಂದು ಕೊಂಚ ವಿನಾಯತಿ ಸಿಕ್ಕಿದೆ. ಕೆಲವು ಪ್ರದೇಶಗಳಲ್ಲಿ ಶಾಲಾ- ಕಾಲೇಜು, ಸರ್ಕಾರಿ ಕಚೇರಿಗಳು ಪುನರಾರಂಭ ಆಗಿದ್ದವು. ಶ್ರೀನಗರದ ಕೆಲವು ಭಾಗದಲ್ಲಿನ ಮಸೀದಿಗಳ ಒಳ ಆವರಣದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗಿತ್ತು. ಜೊತೆಗೆ ಅಗತ್ಯ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸದಿದ್ದರೇ ನಿಬಂಧನೆಗಳಲ್ಲಿ ಸಡಿಲಿಕೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಅಂತೆಯೇ ಉಪ ಮ್ಯಾಜಿಸ್ಟ್ರೇಟ್ ಸೆಕ್ಷೆನ್ 144 ಹಿಂಪಡೆದು ನಿರ್ಬಂಧವನ್ನು ಸಡಿಲಗೊಳಿಸಿದ್ದಾರೆ.
ದೋವೆಲ್ ಭೇಟಿ:
ಆರ್ಟಿಕಲ್ 370 ರದ್ದತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇಂದು ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಿ ರಾಜ್ಯಪಾಲ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿದರು. ಭೇಟಿಯ ಬಳಿಕ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಈದ್ಗೆ ರಾಜ್ಯಪಾಲರ ಅಭಯ:
ರಾಜ್ಯದ ಪ್ರಸ್ತುತ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದ ಸತ್ಯಪಾಲ್ ಮಲಿಕ್ ಅವರು ಶುಕ್ರವಾರದ ಪ್ರಾರ್ಥನೆಗೆ ಅವಕಾಶ ನೀಡಿದ್ದಾರೆ. ಜೊತೆಗೆ ಮುಂದಿನ ವಾರ ನಡೆಯಲಿರುವ ಈದ್ ಹಬ್ಬಕ್ಕೂ ಅನುಕೂಲ ಆಗುವಂತೆ ಇನ್ನಷ್ಟು ವಿನಾಯತಿ ನೀಡುವ ಭರವಸೆ ನೀಡಿದ್ದಾರೆ. ಇದೇ ರೀತಿಯ ಶಾಂತಿ ಕಾಪಾಡಿಕೊಳ್ಳುವಂತೆ ರಾಜ್ಯಪಾಲರು ಮನವಿ ಮಾಡಿದ್ದಾರೆ.
ಕಣಿವೆ ರಾಜ್ಯದತ್ತ ಕಾಶ್ಮೀರಿಗರ ದೌಡು:
ಕರ್ಫ್ಯೂ ಸಡಿಲಿಕೆಗೊಂಡಿರುವ ಹಿನ್ನೆಲೆಯಲ್ಲಿ ಹಲವಾರು ಮಂದಿ ಕಾಶ್ಮೀರಿಗಳು ತಮ್ಮ ಕುಟುಂಬಸ್ಥರೊಂದಿಗೆ ಈದ್ ಹಬ್ಬ ಆಚರಣೆಗಾಗಿ ವಿಮಾನ, ರೈಲ್ವೆ, ರಸ್ತೆ ಮಾರ್ಗದ ಮೂಲಕ ಶ್ರೀನಗರದತ್ತ ತೆರಳುತ್ತಿದ್ದಾರೆ.