ನವದೆಹಲಿ:ಈಶಾನ್ಯ ದೆಹಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾಚಾರದಲ್ಲಿ ಹಾನಿಗೊಳಗಾಗಿದ್ದ 52ಕ್ಕೂ ಹೆಚ್ಚು ಮನೆಗಳನ್ನು ಪುನರ್ ನಿರ್ಮಾಣ ಮಾಡಿದ್ದು ಅವುಗಳನ್ನು ಇಂದು ಹಸ್ತಾಂತರಿಸಲಾಯಿತು ಎಂದು ಜಮಿಯತ್ ಉಲೆಮಾ-ಇ-ಹಿಂದ್ ಸಂಘಟನೆ ತಿಳಿಸಿದೆ.
ಗಲಭೆಯ ನಂತರ ಜಮಿಯತ್ ಉಲೆಮಾ-ಇ-ಹಿಂದ್ ಸಂಘಟನೆ ಸುಟ್ಟುಹೋದ ಮನೆ ಹಾಗೂ ಮಸೀದಿಗಳ ಬಗ್ಗೆ ಸಮೀಕ್ಷೆ ನಡೆಸಿತ್ತು. ಅವುಗಳನ್ನು ದುರಸ್ತಿಗೊಳಿಸಿ ಮರಳಿ ಮಾಲೀಕರಿಗೆ ನೀಡಲಾಗುತ್ತದೆ ಎಂದು ಸಂಸ್ಥೆ ಅಂದೇ ಘೋಷಿಸಿತ್ತು.
ಇಂದು ಈ ಬಗ್ಗೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ಫಜ್ಲೂರ್ ರೆಹಮಾನ್, ಗಲಭೆಯಲ್ಲಿ ಹಾನಿಗೊಳಗಾದ 52ಕ್ಕೂ ಹೆಚ್ಚು ಮನೆಗಳ ಪುನರ್ ನಿರ್ಮಾಣ ಕಾರ್ಯ ಮುಗಿದಿದೆ. ಖಜುರಿ ಖಾಸ್ನಲ್ಲಿ 19, ಕರಾವಲ್ ನಗರದಲ್ಲಿ 17 ಮತ್ತು ಗರ್ಹಿ ಮಹ್ದೋದಲ್ಲಿ 16 ಮನೆಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಯಿತು ಎಂದು ತಿಳಿಸಿದ್ದಾರೆ.
ಹಿಂಸಾಚಾರ ಮತ್ತು ಬೆಂಕಿಯಿಂದ ಖಜುರಿ ಖಾಸ್ನ ಫಾತಿಮಾ ಮಸೀದಿ ಸಂಪೂರ್ಣ ಸುಟ್ಟುಹೋಗಿತ್ತು. ಇದರ ದುರಸ್ತಿ ಕಾರ್ಯ ಇದೀಗ ಪೂರ್ಣಗೊಂಡಿದೆ. ಇನ್ನು ಮುಂದೆ ಇದರಲ್ಲಿ ಪ್ರಾರ್ಥನೆಯನ್ನು ಸಹ ನಡೆಸಲಾಗುತ್ತದೆ ಎಂದರು.
ಸಿಎಎ ಸಂಬಂಧ ಈಶಾನ್ಯ ದೆಹಲಿಯಲ್ಲಿ ಭಾರಿ ಮಟ್ಟದ ಹಿಂಸಾಚಾರ ನಡೆದಿತ್ತು. ಖಜುರಿ ಖಾಸ್, ಕರಾವಲ್ ನಗರ, ಗರ್ಹಿ ಮಹ್ದೋ, ಜಫ್ರಾಬಾದ್, ಮೌಜ್ ಪುರ್, ಯಮುನಾ ವಿಹಾರ್, ಚಾಂದ್ ಬಾಗ್, ಮುಸ್ತಾಫಾಬಾದ್, ಬಜನ್ ಪುರ್ ಸೇರಿದಂತೆ ಹತ್ತಾರು ಪ್ರದೇಶಗಳಲ್ಲಿ ಭಾರಿ ಹಾನಿಯಾಗಿತ್ತು. ದುರ್ಘಟನೆಯಲ್ಲಿ ಪೊಲೀಸರು ಸೇರಿದಂತೆ 53 ಜನ ಪ್ರಾಣ ಕಳೆದುಕೊಂಡಿದ್ದರು.