ಅಮೃತಸರ:1919ರ ಎಪ್ರಿಲ್ 13 ರಂದು ಬ್ರಿಟಿಷರು ಜಾರಿಗೆ ತಂದ ರೌಲಟ್ ಕಾಯಿದೆಯನ್ನು ವಿರೋಧಿಸಿ ಪಂಜಾಬ್ ರಾಜ್ಯದ ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾದ ಅಮೃತಸರದಲ್ಲಿನ ಹೃದಯಭಾಗದಲ್ಲಿರುವ ಜಲಿಯನ್ವಾಲ ಬಾಗ್ ಉದ್ಯಾನದಲ್ಲಿ ಸಹಸ್ರಾರು ಮಂದಿ ಭಾರತೀಯರು, ಮುಖ್ಯವಾಗಿ ಪಂಜಾಬ್ನ ನಾಗರಿಕರು ಸಮಾವೇಶಗೊಂಡಿದ್ದರು. ಅದು ಸಿಖ್ಖರ ಪವಿತ್ರ ದಿನಗಳಲ್ಲೊಂದಾದ ಬೈಸಾಖಿ ದಿನ.
ಆ ಪವಿತ್ರದಿನದಂದು ಬೈಸಾಖಿ ಹಬ್ಬವನ್ನು ಆಚರಿಸಲು ಅಮೃತಸರದಲ್ಲಿ ಸಮಾವೇಶಗೊಳ್ಳುವುದು ಸಂಪ್ರದಾಯವಾಗಿ ರೂಪುಗೊಂಡಿತ್ತು. ಸಂವಹನ ತಂತ್ರಜ್ಞಾನವು ತೀರಾ ಹಿಂದುಳಿದಿದ್ದ ಪಂಜಾಬ್ನಲ್ಲಿ, ಗ್ರಾಮೀಣ ಪ್ರದೇಶದಿಂದ ಅಮೃತಸರಕ್ಕೆ ಬರುತ್ತಿದ್ದ ಜನರಿಗೆ ಶಾಸನಬದ್ಧವಾಗಿ ಅಮೃತಸರದಲ್ಲಿ ಐದಕ್ಕಿಂತ ಹೆಚ್ಚಿನ ಜನ ಗುಂಪುಗೂಡುವಂತಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿರಲಿಲ್ಲ. (ಮಾರ್ಷಲ್ ನಿಯಮ). ಆದ್ದರಿಂದ ಅಂದು ನಡೆದ ಸಮಾವೇಶ, ನಿಯಮದ ಉಲ್ಲಂಘನೆಯಾಗಿತ್ತು ಎನ್ನಲಾಗುತ್ತದೆ.
ನಿಯಮ ಉಲ್ಲಂಘನೆಯಿಂದ ಆಕ್ರೋಶಗೊಂಡ ಬ್ರಿಟಿಷರು ಜನರಿಗೆ ತಕ್ಕಪಾಠ ಕಲಿಸಲು ನಿರ್ಧರಿಸಿದರು. ಪರಿಣಾಮ ಸೈನಿಕರಿದ್ದ ಬಂದೂಕುಗಳಿಂದ ಶಸ್ತ್ರ ಸಜ್ಜಿತವಾದ ತುಕಡಿಯೊಂದು ಉದ್ಯಾನವನಕ್ಕೆ ಎರಡು ಸಜ್ಜಿತ ಕಾರುಗಳೊಂದಿಗೆ ಬಂದಿತು. ಮೆಷಿನ್ಗನ್ ಗಳನ್ನು ಅಳವಡಿಸಲಾಗದ್ದ ಆ ವಾಹನಗಳು, ಉದ್ಯಾನದ ಕಡಿದಾದ ಬಾಗಿಲಿನಿಂದ ಬರಲು ಅಸಾಧ್ಯವಾಗಿತ್ತು. ಆ ತುಕಡಿಯ ನಿಯಂತ್ರಕನಾದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಉದ್ಯಾನದೊಳಗೆ ಕಾಲಿಡುತ್ತಲೇ ಅಲ್ಲಿ ನೆರೆದಿದ್ದವರಿಗೆ ಯಾವೊಂದು ಎಚ್ಚರಿಕೆಯನ್ನೂ ಕೊಡದೆ, ಗುಂಪು ಚದುರುವಂತೆ ಯಾವೊಂದು ಆದೇಶವನ್ನು ನೀಡದೆ ಹಠಾತ್ತಾಗಿ ಗುಂಡಿನ ಮಳೆಗರೆವಂತೆ ಆದೇಶ ನೀಡಿದ.