ನವದೆಹಲಿ :ಎಲ್ಲಾ ರಾಷ್ಟ್ರಗಳು ಬೇರೆ ರಾಷ್ಟ್ರಗಳ ಹಿತಾಸಕ್ತಿಗಳನ್ನು ಗುರ್ತಿಸಿ, ಅಂತಾರಾಷ್ಟ್ರೀಯ ನೀತಿಗಳನ್ನು ಅನುಸರಿಸುವುದು ಅತ್ಯಂತ ಮುಖ್ಯ ಕೆಲಸ ಎಂದು ಪರೋಕ್ಷವಾಗಿ ಚೀನಾದ ವಿರುದ್ಧ ಕೇಂದ್ರ ವಿದೇಶಾಂಗ ಮಂತ್ರಿ ಎಸ್.ಜೈಶಂಕರ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ರಷ್ಯಾ-ಭಾರತ-ಚೀನಾ ಮುಖ್ಯಸ್ಥರಿರುವ ತ್ರಿಪಕ್ಷೀಯ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಇದೊಂದು ವಿಶೇಷ ಸಭೆಯಾಗಿದೆ. ಸದ್ಯದ ವಾತಾವರಣ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿನ ನಂಬಿಕೆಯನ್ನು ಪರೀಕ್ಷಿಸುತ್ತದೆ. ಜೊತೆಗೆ ಸವಾಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಚೀನಾ ದೇಶ ಭಾರತದ ಗಡಿ ಭಾಗದಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ತನ್ನ ಆಕ್ರಮಣಾಕಾರಿ ನೀತಿಗಳನ್ನು ಅನುಸರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಹತ್ವದ ಸಭೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹಾಗೂ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋ ಪಾಲ್ಗೊಂಡಿದ್ದರು.
ಜೂನ್ 15ರಂದು ಭಾರತ ಮತ್ತು ಚೀನಾ ಸೈನ್ಯದ ನಡುವೆ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದು ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಚೀನಾದ ಕಡೆಯೂ 35 ಸೈನಿಕರು ಸಾವನ್ನಪ್ಪಿದ್ದರು. ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ನಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವಂತೆ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಉಭಯ ರಾಷ್ಟ್ರಗಳು ಹಲವು ಹಂತಗಳಲ್ಲಿ ಮಾತುಕತೆ ನಡೆಸಿದ್ದವು. ಸೋಮವಾರ ಲೆಫ್ಟಿನೆಂಟ್ ಜನರಲ್ ಹಂತದ ಮಾತುಕತೆಗಳು ನಡೆದಿದ್ದವು. ಆದರೆ, ಮಾತುಕತೆಗಳು ಯಾವವೂ ಫಲಪ್ರದವಾಗಿರಲಿಲ್ಲ
ಈಗ ವಿಡಿಯೋ ಕಾನ್ಫರೆನ್ಸ್ ಮೂಲಕ ರಷ್ಯಾ- ಇಂಡಿಯಾ- ಚೀನಾದ ವಿದೇಶಾಂಗ ಸಚಿವರ ನಡುವೆ ಮಹತ್ವದ ಸಭೆ ನಡೆದಿದೆ. ಚೀನಾ ವಿದೇಶಾಂಗ ನೀತಿಯನ್ನು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪರೋಕ್ಷವಾಗಿ ಟೀಕಿಸಿದ್ದಾರೆ.