ನವದೆಹಲಿ: ಪೂರ್ವ ಲಡಾಖ್‌ನ ಎಲ್ಎಸಿ ಬಳಿ ಭಾರೀ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ.
ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಜೈಶಂಕರ್ ಮತ್ತು ವಾಂಗ್ ಮಾಸ್ಕೋದಲ್ಲಿದ್ದಾರೆ. ದ್ವಿಪಕ್ಷೀಯ ಮಾತುಕತೆಗಳಲ್ಲದೆ, ರಷ್ಯಾ-ಭಾರತ-ಚೀನಾ (ಆರ್‌ಐಸಿ) ವಿದೇಶಾಂಗ ಮಂತ್ರಿಗಳ ಭೋಜನ ಕೂಟದಲ್ಲಿ ಉಭಯ ನಾಯಕರು ಮುಖಾಮುಖಿಯಾಗುವ ನಿರೀಕ್ಷೆಯಿದೆ.
ಜೈಶಂಕರ್ ಮತ್ತು ವಾಂಗ್ ನಡುವಿನ ದ್ವಿಪಕ್ಷೀಯ ಮಾತುಕತೆ ಪೂರ್ವ ಲಡಾಖ್‌ನಲ್ಲಿನ ಬಿಸಿಯನ್ನು ತಣ್ಣಗಾಗಿಸುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ. ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಚೀನಾ ಗಡಿಯಲ್ಲಿ ಗುಂಡಿನ ಶಬ್ದ ಕೇಳಿ ಬಂದಿದ್ದು, ಉಭಯ ದೇಶಗಳು ಪರಸ್ಪರ ಗಾಳಿಯಲ್ಲಿ ಗುಂಡು ಹಾರಿಸಿವೆ ಎಂದು ಆರೋಪಿಸಿವೆ.
ಜೈಶಂಕರ್ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ದ್ವಿಪಕ್ಷೀಯ ಕಾರ್ಯತಂತ್ರದ ಸಂಬಂಧ ಮತ್ತು ಅಂತಾರಾಷ್ಟ್ರೀಯ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಹೇಳಲಾಗಿದೆ.