ಜಮ್ಮುಕಾಶ್ಮೀರ:ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಶ್ರೀನಗರದ ಲಾಲ್ ಚೌಕ್‌ನಲ್ಲಿ ಸ್ಥಳೀಯರನ್ನು ಭೇಟಿಯಾಗಿ ಅವರೊಂದಿಗೆ ಮುಕ್ತ ಸಂವಾದ ನಡೆಸಿದ್ದಾರೆ.
ತಮ್ಮ ಶ್ರೀನಗರ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಸಕಾರಾತ್ಮಕ ವಾತಾವರಣವಿದೆ. ಜನರೊಂದಿಗೆ ಸಂವಹನ ನಡೆಸುವ ಮೂಲಕ ಈ ಸಕಾರಾತ್ಮಕತೆಯನ್ನು ಅಲ್ಲಿನ ಇತರರಲ್ಲೂ ನಾವು ಹರಡುವ ಪ್ರಯತ್ನದಲ್ಲಿದ್ದೇವೆ. ಈ ಮೂಲಕ ಬದಲಾವಣೆಯ ಬಲವಾದ ವಾತಾವರಣವನ್ನು ಸೃಷ್ಟಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದರು.
ಅಷ್ಟೇ ಅಲ್ಲದೇ, ಜಮ್ಮು ಮತ್ತು ಕಾಶ್ಮೀರ ಭೇಟಿಯ ಉದ್ದೇಶವು ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಖುದ್ದು ಮಾಹಿತಿ ಪಡೆಯುವುದು ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸುವುದು ಎಂದು ಹೇಳಿದ್ದಾರೆ. ಆಗಸ್ಟ್ನಲ್ಲಿ ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕೇಂದ್ರದ ಕಾರ್ಯಕ್ರಮದ ಭಾಗವಾಗಿ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಇದು ಕೇಂದ್ರ ಸಚಿವ ನಖ್ವಿಯ ಮೊದಲ ಭೇಟಿಯಾಗಿದೆ.
ಕೇಂದ್ರದ ಐವರು ಸಚಿವರು ಕಾಶ್ಮೀರದ ಕೆಲವು ಭಾಗಗಳಿಗೆ ಭೇಟಿ ನೀಡಲಿದ್ದು, ಉಳಿದವರು ಜಮ್ಮುಗೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಈ ಯೋಜನೆ ಕೇಂದ್ರ ಜನರೊಂದಿಗೆ ತೊಡಗಿಸಿಕೊಳ್ಳಲು ಮಾಡುತ್ತಿರುವ ಪ್ರಾರಂಭಿಕ ಹೆಜ್ಜೆಯಾಗಿದ್ದು, ಇದು ಕೊನೆಯ ಕಾರ್ಯಕ್ರಮವಲ್ಲ. ಈ ಉಪಕ್ರಮವು ಮುಂದುವರಿಯುತ್ತದೆ ಎಂದಿದ್ದಾರೆ.