ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಗುಪ್ಕರ್ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಒಟ್ಟು 280 ಸ್ಥಾನಗಳ ಪೈಕಿ ಗುಪ್ಕರ್ ಮೈತ್ರಿಕೂಟದ ಪಕ್ಷಗಳು 110 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಗುಪ್ಕರ್ ಘೋಷಣೆಗಾಗಿ ಜಮರ ಒಕ್ಕೂಟ (ಪಿಎಜಿಡಿ) 110 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಚುನಾವಣೆಯಲ್ಲಿ ಬಿಜೆಪಿ ಕೂಡ ಹಿಂದೆಬಿದ್ದಿಲ್ಲ. ಪಕ್ಷವಾರು ಲೆಕ್ಕಾಚಾರದಲ್ಲಿ ಬಿಜೆಪಿ ನಂಬರ್ 1 ಸ್ಥಾನದಲ್ಲಿಯೇ ಇದೆ. ಈ ಪೈಕಿ ಬಿಜೆಪಿಯೊಂದೇ 74 ಸ್ಥಾನಗಳಲ್ಲಿ ಜಯಗಳಿಸಿದೆ.
ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಪಿಡಿಪಿ ಅಧ್ಯಕ್ಷ ಮೆಹಬೂಬಾ ಮುಫ್ತಿ ಮತ್ತು ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಜನರು ಗುಪ್ಕರ್ ಮೈತ್ರಿಕೂಟಕ್ಕೆ ಮತ ಚಲಾಯಿಸಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಸಂವಿಧಾನದ 370 ನೇ ವಿಧಿ ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಜನರು ತಿರಸ್ಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷಾಧಿಕಾರ ನೀಡಿದ್ದ ಆರ್ಟಿಕಲ್ 370 ನ್ನು ರದ್ದುಗೊಳಿಸಿದ ಬೆನ್ನಲ್ಲೇ ಜನತಾ ಅಭಿಪ್ರಾಯ ಸಂಗ್ರಹಣೆ ಎಂದೇ ಡಿಡಿಸಿ ಚುನಾವಣೆಯನ್ನು ಪರಿಗಣಿಸಲಾಗಿತ್ತು.