ಚೆನ್ನೈ: ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದಲ್ಲಿರುವ ಕಲ್ಕಿ ಭಗವಾನ್ ಆಶ್ರಮ ಮತ್ತು ಅವರ ಮಗ ಕೃಷ್ಣ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಐಟಿ ಇಲಾಖೆ ಬುಧವಾರ ಏಕಕಾಲದಲ್ಲಿ 40 ಕಡೆ ದಾಳಿ ನಡೆಸಿ ಶಾಕ್ ನೀಡಿತ್ತು. ಈ ದಾಳಿಯಲ್ಲಿ ವಜ್ರ, ಬಂಗಾರ, ಡಾಲರ್ ಸೇರಿದಂತೆ ಸುಮಾರು 93 ಕೋಟಿ ರೂ ಮೌಲ್ಯದ ಸಂಪತ್ತು ಮತ್ತು 409 ಕೋಟಿ ರೂಗೂ ಹೆಚ್ಚಿನ ಮೌಲ್ಯದ ಅಘೋಷಿತ ಸಂಪತ್ತು ಪತ್ತೆಯಾಗಿದೆ ಎಂದು ಐಟಿ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ರಿಯಲ್ ಎಸ್ಟೇಟ್, ನಿರ್ಮಾಣ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಧ್ಯಾತ್ಮಿಕ ಗುರು ಕಲ್ಕಿ ಅವರ ಮಗ ಕೃಷ್ಣ ಹಣ ಹೂಡಿಕೆ ಮಾಡಿದ್ದಾರೆ. ಟ್ರಸ್ಟ್ ಮತ್ತು ಆಶ್ರಮದಿಂದ ಆರೋಗ್ಯ ಶಿಬಿರ ಮತ್ತು ಆಧ್ಯಾತ್ಮಿಕ, ತತ್ವಶಾಸ್ತ್ರ ತರಬೇತಿ ಶಿಬಿರಗಳನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಶಿಬಿರಕ್ಕೆ ಬರುವವರಿಗೆ ಕ್ಯಾಂಪ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿಗೆ ಹೆಚ್ಚಾಗಿ ವಿದೇಶಿ ಗ್ರಾಹಕರು ಬರುತ್ತಾರೆ. ಹೀಗಾಗಿ ಸಾಕಷ್ಟು ವಿದೇಶಿ ಹಣ ವಿನಿಮಯವಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಭೂಮಿ ಮೇಲೆ ಸಾಕಷ್ಟು ಪ್ರಮಾಣದ ಹೂಡಿಕೆ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.