ನವದೆಹಲಿ:ನಾಯಕತ್ವ ಬದಲಾವಣೆ, ಪಕ್ಷದ ನೀತಿ ನಡವಳಿಕೆಗಳ ಕುರಿತು ಸೋನಿಯಾ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ನ 23 ನಾಯಕರಲ್ಲಿ ಒಬ್ಬರಾದ ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ "ಇದು ಒಂದು ಹುದ್ದೆಯ ಬಗ್ಗೆ ಅಲ್ಲದೇ ಇಡೀ ದೇಶದ ಬಗ್ಗೆ ಹೆಚ್ಚು ಮಹತ್ವದ್ದಾಗಿದೆ" ಎಂದಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ನಂತರ ಮಾಡಿದ ಟ್ವೀಟ್ನಲ್ಲಿ ಸಿಬಲ್ ಈ ಹೇಳಿಕೆಗಳನ್ನು ನೀಡಿದ್ದಾರೆ."ಇದು ಒಂದು ಹುದ್ದೆಯ ಕುರಿತಾದ ಪ್ರಶ್ನೆಯಲ್ಲ ಬದಲಾಗಿ ನನ್ನ ದೇಶದ ಬಗ್ಗೆ ಇರುವ ಚಿಂತನೆ" ಎಂದು ಟ್ವೀಟ್ ಮಾಡಿದ್ದಾರೆ.
ಪಕ್ಷದ ನಾಯಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ ಏಳು ಗಂಟೆಗಳ ಸಭೆಯ ನಂತರ, ಸಿಐಡಬ್ಲ್ಯುಸಿ ಸೋನಿಯಾ ಗಾಂಧಿ ಅವರನ್ನ ಎಐಸಿಸಿ ಅಧಿವೇಶನ ನಡೆಯುವವರೆಗೂ ತನ್ನ ಮಧ್ಯಂತರ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವಂತೆ ಒತ್ತಾಯಿಸಿದೆ. ಪಕ್ಷ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಸಾಂಸ್ಥಿಕ ಬದಲಾವಣೆಗಳನ್ನು ಜಾರಿಗೆ ತರಲು ಅವರಿಗೆ ಅಧಿಕಾರ ನೀಡಲಾಗಿದೆ.
ಪಕ್ಷ ಮತ್ತು ಅದರ ನಾಯಕತ್ವ ದುರ್ಬಲಗೊಳಿಸಲು ಯಾರಿಗೂ ಅನುಮತಿ ನೀಡುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಸಿಡಬ್ಲ್ಯುಸಿ ಆಂತರಿಕ ಪಕ್ಷದ ಸಮಸ್ಯೆಗಳನ್ನು ಮಾಧ್ಯಮಗಳ ಮೂಲಕ ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಅಂತಹ ಎಲ್ಲ ಸಮಸ್ಯೆಗಳನ್ನು ಪಕ್ಷದೊಳಗೆ ಬಗೆಹರಿಸಿಕೊಳ್ಳಬೇಕು ಎನ್ನಲಾಗಿದೆ.
ಸಿಡಬ್ಲ್ಯುಸಿ ಸಭೆ ನಂತರ ಸಿಬಲ್ ಮತ್ತು ಶಶಿ ತರೂರ್ ಸೇರಿದಂತೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ತಮ್ಮ ಹಿರಿಯ ಸಹೋದ್ಯೋಗಿ ಗುಲಾಮ್ ನಬಿ ಆಜಾದ್ ಅವರ ಮನೆಯಲ್ಲಿ ಸಭೆ ನಡೆಸಿದ್ದರು. ಸೋಮವಾರ ಸಂಜೆ ನಡೆದ ಸಭೆಯಲ್ಲಿ ಮುಕುಲ್ ವಾಸ್ನಿಕ್ ಮತ್ತು ಮನೀಶ್ ತಿವಾರಿ ಅವರು ಭಾಗವಹಿಸಿದ್ದರು.
ಪೂರ್ಣ ಪ್ರಮಾಣದ ನಾಯಕತ್ವವನ್ನು ಹೊಂದಿರುವುದು, ರಾಜ್ಯ ಘಟಕಗಳಿಗೆ ಅಧಿಕಾರ ಹಂಚಿಕೆ ಮತ್ತು ಪಕ್ಷದ ಸಂವಿಧಾನಕ್ಕೆ ಅನುಗುಣವಾಗಿ ಸಿಡಬ್ಲ್ಯೂಸಿಯನ್ನು ಪರಿಷ್ಕರಿಸುವುದು, ಸಂಘಟನೆಯನ್ನು ಪುನರುಜ್ಜೀವನಗೊಳಿಸುವಂತೆ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ 23 ಹಿರಿಯ ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದರು.