ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಕೊರೊನಾ ಬಿಕ್ಕಟ್ಟಿನ ಹೊಡೆತಕ್ಕೆ ಸಿಲುಕಿದ ದೇಶದ ಮಾಹಿತಿ ತಂತ್ರಜ್ಞಾನ ವಲಯ..! - ಕೊರೊನಾ ಸಾಂಕ್ರಾಮಿಕ ರೋಗ

ಐಟಿ ಎಂಬುದು ಜ್ಞಾನ ಆಧಾರಿತ ಉದ್ಯಮವಾಗಿದ್ದು, ಇದು ಮಾನವನ ಜೀವನದಲ್ಲಿ ಪ್ರಮುಖ ಪರಿವರ್ತನೆಗಳಿಗೆ ಕಾರಣವಾಗಿದೆ. ಸಂಘಟಿತ, ತ್ವರಿತ, ಸುಲಭ, ಪಾರದರ್ಶಕ ಮತ್ತು ಸಮೃದ್ಧ ಆಗುವುದರ ಜೊತೆಗೆ, ಇದು ಸ್ಟಾರ್ಟ್ಅಪ್ ವಲಯಕ್ಕೆ ಉತ್ತೇಜನ ನೀಡಿದೆ.

IT corona target
ಕೊರೊನಾ ಬಿಕ್ಕಟ್ಟಿನ ಹೊಡೆತಕ್ಕೆ ಸಿಲುಕಿದ ದೇಶದ ಮಾಹಿತಿ ತಂತ್ರಜ್ಞಾನ ವಲಯ

By

Published : May 20, 2020, 1:17 PM IST

ಹೈದರಾಬಾದ್: ಭಾರತದ ಬೆಳವಣಿಗೆಯ ಕಥೆಯನ್ನು ಪುನಾರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಹಿತಿ ತಂತ್ರಜ್ಞಾನ ( ಐ ಟಿ ) ಉದ್ಯಮಕ್ಕೆ ಕೊರೊನಾ ಸಾಂಕ್ರಾಮಿಕ ರೋಗ ಭಾರಿ ಪೆಟ್ಟು ನೀಡಿದೆ. ಕಾರ್ಯಾಚರಣೆ ಸ್ಥಗಿತಗೊಳ್ಳುವುದರೊಂದಿಗೆ ಉತ್ಪನ್ನಗಳು ಹಾಗೂ ಸೇವೆಗಳು ಅಸ್ತವ್ಯಸ್ತಗೊಂಡಿವೆ. 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿಗೆ ಅಪಾಯ ಎದುರಾಗಿದೆ. ಇದು ಭಾರತದ ಐ ಟಿ ಉದ್ಯಮದಲ್ಲಿ ಹಿಂದೆಂದೂ ಕಂಡು ಕೇಳರಿಯದ ಬಿಕ್ಕಟ್ಟು. ಆರ್ಥಿಕ ಕುಸಿತದೊಂದಿಗೆ ಈಗಾಗಲೇ ಸೆಣಸುತ್ತಿದ್ದ ಉದ್ಯಮಕ್ಕೆ ಇತ್ತೀಚಿನ ಬೆಳವಣಿಗೆಗಳು ಮತ್ತೊಂದು ಹೊಡೆತ ನೀಡಿವೆ. ಅದಕ್ಕೆ ಈಗಾಗಲೇ ಎದುರಾಗಿರುವ ದೊಡ್ಡ ಸವಾಲು ಪ್ರಸ್ತುತ ಪ್ರತಿಕೂಲ ಪರಿಸ್ಥಿತಿಯಲ್ಲಿ ಮತ್ತಷ್ಟು ಬೃಹದಾಕಾರ ಪಡೆಯಬಹುದು.

ಐ ಟಿ ಎಂಬುದು ಜ್ಞಾನ ಆಧಾರಿತ ಉದ್ಯಮವಾಗಿದ್ದು, ಇದು ಮಾನವನ ಜೀವನದಲ್ಲಿ ಪ್ರಮುಖ ಪರಿವರ್ತನೆಗಳಿಗೆ ಕಾರಣವಾಗಿದೆ. ಸಂಘಟಿತ, ತ್ವರಿತ, ಸುಲಭ, ಪಾರದರ್ಶಕ ಮತ್ತು ಸಮೃದ್ಧ ಆಗುವುದರ ಜೊತೆಗೆ, ಇದು ಸ್ಟಾರ್ಟ್ಅಪ್ ವಲಯಕ್ಕೆ ಉತ್ತೇಜನ ನೀಡಿದೆ. ಇದು ಆಧುನಿಕ ಆಡಳಿತ ಮತ್ತು ಡಿಜಿಟಲ್ ಜಗತ್ತಿಗೆ ದಾರಿ ಮಾಡಿಕೊಟ್ಟಿದೆ. ಸುಮಾರು ಐದು ದಶಕಗಳಲ್ಲಿ ಭಾರತ ಐ ಟಿ ಕ್ಷೇತ್ರದಲ್ಲಿ ಸುಸ್ಥಿರ ಸ್ಥಾನ ಪಡೆದಿದೆ. ನಮ್ಮ ದೇಶದ ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸುವಲ್ಲಿ ಐ ಟಿಯ ಪಾತ್ರ ಪ್ರಮುಖವಾದುದು. ಇದು ಒಟ್ಟು ಜಿ ಡಿ ಪಿಯ ಶೇಕಡಾ 7.7 ರಷ್ಟಿದೆ.

ಇತ್ತೀಚಿನ ದಿನಗಳಲ್ಲಿ ಅಪೇಕ್ಷಣೀಯ ಬೆಳವಣಿಗೆಯ ಪಥದ ಅಂದಾಜಿನಂತೆ ಭಾರತವು ಐ ಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದೆ. ಜಾಗತಿಕ ಐ ಟಿ ಸೇವೆಗಳಲ್ಲಿ ನಮ್ಮ ಮಾರುಕಟ್ಟೆ ಪಾಲು ಶೇ 55ರಷ್ಟು ಇದೆ. ಜಗತ್ತಿನ ಎಲ್ಲೆಡೆ ಸುಮಾರು 80 ದೇಶಗಳಲ್ಲಿ 200 ಭಾರತೀಯ ಐ ಟಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ವಿಶ್ವದ ಶೇ 75 ರಷ್ಟು ಡಿಜಿಟಲ್ ಸೇವೆಗಳನ್ನು ಭಾರತ ಒದಗಿಸುತ್ತದೆ. ಭಾರತದ ಐ ಟಿ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ತತ್ಸಂಬಂಧಿ ಸೇವೆಗಳ ( ಐ ಟಿ ಇ ಎಸ್ ) ಉದ್ಯಮದ ಗಾತ್ರವನ್ನು 2018 - 19ರಲ್ಲಿ 181 ಶತಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ.

ಇದು 137 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ರಫ್ತುಗಳನ್ನು ಒಳಗೊಂಡಿದೆ. ಭಾರತೀಯ ಐ ಟಿ ಉದ್ಯಮ ಕ್ರಮೇಣ ವಿಸ್ತರಿಸುತ್ತಿದೆ ಮತ್ತು ವಿದೇಶಿ ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುತ್ತಿದೆ. 2000 ಮತ್ತು 2019 ರ ನಡುವೆ, 43 ಶತಕೋಟಿ ಡಾಲರ್ ಮೌಲ್ಯದ ಹಾರ್ಡ್‌ವೇರ್ ಮತ್ತು ಸಾಫ್ಟ್ವೇರ್ ಕ್ಷೇತ್ರಗಳಲ್ಲಿ ವಿದೇಶಿ ಹೂಡಿಕೆ ವರದಿಯಾಗಿದೆ. ಉದ್ಯೋಗದ ದೃಷ್ಟಿಯಿಂದಲೂ ಉದ್ಯಮವು ವಿಸ್ತರಿಸಿದೆ. ದೇಶೀಯವಾಗಿ, ಭಾರತೀಯ ಐ ಟಿ 46 ಲಕ್ಷ ಜನರಿಗೆ ಉದ್ಯೋಗ ನೀಡುತ್ತದೆ. ವಿದೇಶದಲ್ಲಿ ಹೆಚ್ಚುವರಿಯಾಗಿ 20 ಲಕ್ಷ ಉದ್ಯೋಗಿಗಳು ಇದ್ದಾರೆ. ಕಳೆದ ಎರಡು ದಶಕಗಳಲ್ಲಿ ಉದ್ಯೋಗ ಆದ್ಯತೆಯ ಪಟ್ಟಿಯಲ್ಲಿ ಐ ಟಿ ಪ್ರಥಮ ಸ್ಥಾನದಲ್ಲಿ ಇದೆ. ವೃತ್ತಿಜೀವನದ ಪ್ರಗತಿಯ ಅವಕಾಶಗಳು ಮತ್ತು ಆಕರ್ಷಕ ವಿಶ್ವಾಸಗಳಿಂದಾಗಿ ಹೆಚ್ಚಿನ ಜನರು ಐ ಟಿ ಕೆಲಸ ಮಾಡಲು ಬಯಸುತ್ತಾರೆ.

ಒಂದು ಕಾಲದಲ್ಲಿ ಗಗನಮುಖಿಯಾಗಿದ್ದ ಐ ಟಿ ಉದ್ಯಮ ತನ್ನ ಕಷ್ಟದ ದಿನಗಳನ್ನು ಕೂಡ ಕಂಡಿದೆ. ಹಣಕಾಸಿನ ಬಿಕ್ಕಟ್ಟುಗಳು, ವೆಚ್ಚ ನಿಯಂತ್ರಣ ಕ್ರಮಗಳು, ರೋಬೋಟಿಕ್ಸ್ ಹಾಗೂ ಡೇಟಾ ಅನಾಲಿಸಿಸ್ ಎಲ್ಲವೂ ಸೇರಿ ಐ ಟಿಯ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಗಾದಿ ಹಿಡಿದಾಗಿನಿಂದ ಸಂಗತಿಗಳು ಬದಲಾಗತೊಡಗಿದವು. ಅವರು ಭಾರತದ ಐ ಟಿ ತಜ್ಞರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ವಿನಾಶಕಾರಿಯಾಗುವ ರೀತಿಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಕುಸಿತದಿಂದಾಗಿ, ಕ್ಯಾಂಪಸ್ ಆಯ್ಕೆ ಮತ್ತು ಹೊಸ ಉದ್ಯೋಗಗಳ ಪ್ರಮಾಣ ಕಡಿಮೆಯಾಗಿ ಉದ್ಯೋಗ ಸೃಷ್ಟಿಯ ಅಂತರ ಹೆಚ್ಚಿತು. ತಜ್ಞರು ಕೂಡ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ.

ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ಉದ್ಯಮಕ್ಕೆ ಸಾಂಕ್ರಾಮಿಕ ರೋಗವು ಹಠಾತ್ ಹೊಡೆತ ನೀಡಿದೆ. ಹಲವಾರು ರಾಷ್ಟ್ರಗಳು ಲಾಕ್‌ಡೌನ್ ಹಾದಿ ಹಿಡಿಯುತ್ತಿದ್ದಂತೆ ಜಗತ್ತಿನ ಎಲ್ಲೆಡೆ ಐ ಟಿ ಸೇವೆಗಳು ಪಾರ್ಶ್ವವಾಯುವಿಗೆ ತುತ್ತಾದವು. ಕೊರೊನಾ ಬಿಕ್ಕಟ್ಟಿನಿಂದ ಭಾರತ ಒಂದರಲ್ಲೇ 1.5 ಲಕ್ಷ ಉದ್ಯೋಗಗಳು ನಷ್ಟ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಆದಾಯ ಕುಸಿಯುತ್ತಿದ್ದಂತೆ, ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡಿವೆ. ಕೆಲವು ಕಂಪೆನಿಗಳು ವೇತನ ಕಡಿತ ಘೋಷಿಸಿವೆ. ಬಹುತೇಕ ಪ್ರಮುಖ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಪ್ರೋತ್ಸಾಹ ನೀಡುತ್ತಿವೆ. ಹೊಸ ಪ್ರಾಜೆಕ್ಟ್ಗಳು ಸ್ಥಗಿತಗೊಂಡಿವೆ.

ಭಾರತದ ಸುಮಾರು ಶೇ 75ರಷ್ಟು ಐ ಟಿ ಸೇವೆಗಳು ಯೂರೋಪ್ ಮತ್ತು ಅಮೆರಿಕನ್ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡಿದ್ದು ಆ ಎರಡೂ ಮಾರುಕಟ್ಟೆಗಳು ಸಾಂಕ್ರಾಮಿಕ ರೋಗದ ಪರಿಣಾಮಕ್ಕೆ ತತ್ತರಿಸಿವೆ. ತಕ್ಷಣದ ಚೇತರಿಕೆಯ ಸಾಧ್ಯತೆಗಳು ಕಡಿಮೆ ಇರುವುದರಿಂದ ಈ ವಲಯ ಕೆಟ್ಟ ತಿರುವು ಪಡೆಯುವ ಸಾಧ್ಯತೆ ಇದೆ. ಹೊಸ ನೇಮಕಾತಿಗಳು ಅಪರೂಪ ಆಗಬಹುದು. ಗ್ರಾಹಕರು ಮುಂಬರುವ ಯೋಜನೆಗಳನ್ನು ರದ್ದುಗೊಳಿಸಬಹುದು ಅಥವಾ ಅನಿರ್ದಿಷ್ಟವಾಗಿ ಮುಂದೂಡಬಹುದು ಎಂಬ ಆತಂಕಗಳು ಇವೆ.

ಐ ಟಿ ಪ್ರಭಾವಿಯಾಗಿರುವ ಸೇವಾ ಕ್ಷೇತ್ರ ಉಳ್ಳ ರಾಜ್ಯಗಳಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಂಚೂಣಿಯಲ್ಲಿವೆ. ಪ್ರತಿ ವರ್ಷ, ಐ ಟಿ ಮತ್ತು ಸಂಬಂಧಿತ ಕೋರ್ಸ್‌ಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಎರಡೂ ರಾಜ್ಯಗಳ ವಿದ್ಯಾರ್ಥಿಗಳು ವಿಶ್ವದ ಹಲವಾರು ಪ್ರಮುಖ ಐ ಟಿ ಕಂಪನಿಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಇದ್ದಾರೆ. ಸತ್ಯ ನಾದೆಲ್ಲಾ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್ ಸಂಸ್ಥೆಯ ಸಿ ಇ ಒ. ಆಂಧ್ರ ಮತ್ತು ತೆಲಂಗಾಣದ 6 ಲಕ್ಷ ಜನರು ನೇರವಾಗಿ ಐ ಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ಇದ್ದಾರೆ. ಎರಡೂ ರಾಜ್ಯಗಳಲ್ಲಿನ ಸರ್ಕಾರಗಳು ಡಿಜಿಟಲ್ ಸೇವೆಗಳು ಮತ್ತು ಇ- ಆಡಳಿತವನ್ನು ಬೆಂಬಲಿಸುತ್ತವೆ. ವಿಶ್ವ ಪ್ರಸಿದ್ಧ ಕಂಪನಿಗಳಾದ ಗೂಗಲ್, ಮೈಕ್ರೋಸಾಫ್ಟ್, ಐ ಬಿ ಎಂ, ಅರಾಕಲ್ ಹಾಗೂ ಅಮೆಜಾನ್ನ ಪ್ರಮುಖ ಕ್ಯಾಂಪಸ್‌ಗಳು ಹೈದರಾಬಾದ್‌ನಲ್ಲಿ ಇವೆ. ವಿಜಯವಾಡ ಮತ್ತು ವಿಶಾಖಪಟ್ಟಣದಂತಹ ನಗರಗಳಲ್ಲಿ ಐ ಟಿ ಕ್ಷೇತ್ರ ವೇಗವಾಗಿ ಪ್ರಗತಿ ಸಾಧಿಸುತ್ತಿದೆ.

ಐ ಟಿ ಕ್ಷೇತ್ರದ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗುವ ಅವಶ್ಯಕತೆ ಇದೆ. ಐ ಟಿ ತಜ್ಞರು ಮತ್ತು ನೀತಿ ನಿರೂಪಕರನ್ನು ಒಳಗೊಂಡ ವಿಶೇಷ ಕಾರ್ಯಪಡೆ ನೇಮಕ ಆಗಬೇಕಿದೆ. ಯಾವುದೇ ವಲಯಕ್ಕೆ ಸ್ಥಿರತೆ ಅತ್ಯಂತ ಮಹತ್ವದ್ದಾಗಿ ಇರುವುದರಿಂದ, ಕಂಪನಿಗಳನ್ನು ಉಳಿಸಿಕೊಳ್ಳಲು ಸರ್ಕಾರ ಸಹಾಯ ಮಾಡಬೇಕಿದೆ. ದೇಶೀಯ ಐ ಟಿ ವಲಯ ಗೇಮಿಂಗ್, ಅನಿಮೇಷನ್, ಎಲೆಕ್ಟ್ರಾನಿಕ್ ಉತ್ಪಾದನೆ ಮತ್ತು ಗ್ರಾಮೀಣ ತಂತ್ರಜ್ಞಾನ ರೀತಿಯ ನವೀನ ಕ್ಷೇತ್ರಗಳತ್ತ ಗಮನ ಹರಿಸಬೇಕಿದೆ. ಸಾಂಕ್ರಾಮಿಕ ರೋಗದ ಬಿಕ್ಕಟ್ಟು ಕೊನೆಗೊಂಡ ನಂತರ, ಹಲವಾರು ದೇಶಗಳ ಐಟಿ ಕಂಪೆನಿಗಳು ತಮ್ಮ ನೆಲೆಯನ್ನು ಚೀನಾದಿಂದ ಬದಲಿಸಬಹುದು.

ಈ ಅವಕಾಶವನ್ನು ಭಾರತ ಬಳಸಿಕೊಳ್ಳಬೇಕು. ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿರುವ ನೀತಿಗಳನ್ನು ಪರಿಶೀಲಿಸಬೇಕು ಮತ್ತು ಸುಧಾರಣೆಗಳತ್ತ ಗಮನ ಹರಿಸಬೇಕು. ಐ ಟಿ ಸಂಸ್ಥೆಗಳಿಗೆ ಧೈರ್ಯ ತುಂಬುವ ಅಗತ್ಯ ಇದೆ. ಬಿಕ್ಕಟ್ಟಿನಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರಿದ ಸಂಸ್ಥೆಗಳಿಗೆ ಕೇಂದ್ರ ಬೆಂಬಲ ನೀಡಬೇಕು. ಭೂಮಿ, ವೇತನ ಹಾಗೂ ತೆರಿಗೆಯನ್ನು ಕೇಂದ್ರೀಕರಿಸಿದ ಅಲ್ಪಾವಧಿ ಮತ್ತು ದೀರ್ಘಕಾಲೀನ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಎಂಎಸ್‌ಎಂಇಗೆ ಸಾಲ ಖಾತ್ರಿ ನೀಡಬೇಕು. ನಿಖರ ಮತ್ತು ದೀರ್ಘಕಾಲೀನ ಯೋಜನೆಯೊಂದಿಗೆ ಸರಿಯಾದ ಸುಧಾರಣೆಗಳು ನಡೆದರೆ ಮಾತ್ರ ಭಾರತದ ಐ ಟಿ ಕ್ಷೇತ್ರ ಚೇತರಿಕೆ ಕಾಣಲಿದೆ.

ABOUT THE AUTHOR

...view details