ಅಹಮದಾಬಾದ್ (ಗುಜರಾತ್):ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಹಾನಿ ಮಾಡಲು ಯಾರೋ ಬಯಸುತ್ತಿದ್ದಾರೆ. ಅವರನ್ನು ಹಿಡಿದು ಶಿಕ್ಷೆ ನೀಡುವುದೊಂದೇ ಪರಿಹಾರ ಎಂದು ವಿಜ್ಞಾನಿ ತಪನ್ ಮಿಶ್ರಾ ಹೇಳಿದ್ದಾರೆ.
ಮೂರು ವರ್ಷದ ಹಿಂದೆ ತನಗೆ ಆರ್ಸೆನಿಕ್ ವಿಷ ನೀಡಲಾಗಿತ್ತು ಎಂದು ಆರೋಪಿಸಿದ್ದ ಇಸ್ರೋದ ಉನ್ನತ ವಿಜ್ಞಾನಿ ತಪನ್ ಮಿಶ್ರಾ ಅವರು ಈ ಹೇಳಿಕೆ ನೀಡಿದ್ದು ಗಮನಾರ್ಹವಾಗಿದೆ.
ಇಸ್ರೋ ಹಿರಿಯ ವಿಜ್ಞಾನಿ ತಪನ್ ಮಿಶ್ರಾ ಪ್ರತಿಕ್ರಿಯೆ ಖಂಡಿತವಾಗಿಯೂ ಇದು ಸಾಮಾನ್ಯರ ಕೆಲಸವಲ್ಲ, ಬದಲಾಗಿ ನಮ್ಮೊಳಗಿನ ಕೆಲವು ಅತ್ಯಾಧುನಿಕ ಬೇಹುಗಾರಿಕಾ ಸಂಸ್ಥೆಯ ಕೆಲಸ ಎಂದು ಅವರು ತಪನ್ ಆರೋಪಿಸಿದ್ದಾರೆ.
ಇಸ್ರೋದಲ್ಲಿರುವ 2 ಸಾವಿರಕ್ಕೂ ಅಧಿಕ ವಿಜ್ಞಾನಿಗಳಿಗೆ ಭದ್ರತೆ ನೀಡುವ ಬದಲು, ಮೊದಲಿಗೆ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನನಗ್ಯಾಕೆ ವಿಷ ನೀಡಿದ್ದರು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ನಾನು ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡಿರುವುದು ಇದಕ್ಕೆ ಕಾರಣವಿರಬಹುದು. ಈ ಕುರಿತು ತನಿಖೆ ನಡೆಸಿದರೆ ಸರಿಯಾದ ಮಾಹಿತಿ ಹೊರ ಬರಬಹುದು ಎಂದು ಅವರು ಹೇಳಿದ್ದಾರೆ.
ನಾನು ಅನೇಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದೆ. ಚರ್ಮದ ಸಮಸ್ಯೆ ಉಂಟಾಗಿದ್ದವು. ಸುದೀರ್ಘ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದೇನೆ. ಆದರೆ ನಾನು ಇದ್ಯಾವುದಕ್ಕೂ ಹೆದರುವುದಿಲ್ಲ, ದೇಶಕ್ಕಾಗಿ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.