ಬೆಂಗಳೂರು: ಚಂದ್ರಯಾನ-2 ಕೊನೇ ಕ್ಷಣದಲ್ಲಿ ಲ್ಯಾಂಡರ್ ಸಂಪರ್ಕ ಕಡಿತಗೊಂಡು ಯೋಜನೆ ಶೇ.ನೂರರಷ್ಟು ಯಶಸ್ಸು ಸಾಧಿಸುವಲ್ಲಿ ವಿಫಲವಾಗಿತ್ತು. ಆದರೆ ವಿಜ್ಞಾನಿಗಳು ಸಂಪರ್ಕವನ್ನು ಮತ್ತೆ ಸಾಧಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ.
ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ವಿಕ್ರಮ್ ಲ್ಯಾಂಡರ್ ಸಂಪೂರ್ಣ ಸುರಕ್ಷಿತವಾಗಿದೆ. ಆದರೆ ಲ್ಯಾಂಡರ್ ನಿರೀಕ್ಷೆಯಂತೆ ಸಾಫ್ಟ್ ಲ್ಯಾಂಡ್ ಆಗಿಲ್ಲ. ಆದರೂ ವಿಕ್ರಮ್ ಲ್ಯಾಂಡರ್ಗೆ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೋ ಮೂಲಗಳು ಮಾಹಿತಿ ನೀಡಿವೆ. ಲ್ಯಾಂಡರ್ ಜೊತೆಗಿನ ಸಂಪರ್ಕ ಮಾತ್ರ ಇನ್ನೂ ಸಾಧ್ಯವಾಗಿಲ್ಲ.
ಇಸ್ರೋದಿಂದ ಗುಡ್ ನ್ಯೂಸ್! ವಿಕ್ರಮ್ ಲ್ಯಾಂಡರ್ ಪತ್ತೆ!
ಸ್ವಯಂಚಾಲಿತವಾಗಿ ಚಂದ್ರನ ಮೇಲ್ಮೈ ಯನ್ನು ಸುರಕ್ಷಿತವಾಗಿ ಇಳಿಯಬೇಕಿದ್ದ ವಿಕ್ರಮ್ ಲ್ಯಾಂಡರ್ 2.1ಕಿ.ಮೀ ಬಾಕಿ ಇರುವ ವೇಳೆ ಸಂಪರ್ಕ ಕಡಿತಗೊಂಡಿತ್ತು. ಆದರೆ ಚಂದ್ರನಿಂದ ನೂರು ಕಿ.ಮೀ ದೂರದಲ್ಲಿರುವ ಆರ್ಬಿಟರ್, ವಿಕ್ರಮ್ ಲ್ಯಾಂಡರ್ ಥರ್ಮಲ್ ಫೋಟೋವನ್ನು ಇಸ್ರೋ ಸ್ಟೇಷನ್ಗೆ ಭಾನುವಾರ ಕಳುಹಿಸಿತ್ತು. ಫೋಟೋ ಹಾಗೂ ಬೆಳವಣಿಗೆ ಇಸ್ರೋ ವಿಜ್ಞಾನಿಗಳ ತಂಡದಲ್ಲಿ ಹೊಸ ಆಶಾವಾದ ಮೂಡಿಸಿತ್ತು.
ಚಂದ್ರಯಾನ -2 ವಿಕ್ರಮ್ ಲ್ಯಾಂಡರ್ ಜೊತೆ ಸಂವಹನ ಸಾಧಿಸುವುದು ತುಸು ಕಷ್ಟವೇ ಸರಿ ಎಂದು ಚಂದ್ರಯಾನ ಮಿಷನ್ -1ರ ವಿಜ್ಞಾನಿಗಳು ಅಭಿಪ್ರಯಾಪಟ್ಟಿದ್ದಾರೆ.