ಶ್ರೀಹರಿಕೋಟಾ(ಆಂಧ್ರಪ್ರದೇಶ):ಭಾರತದ ಭೂವೀಕ್ಷಣೆ ಉಪಗ್ರಹ ಸೇರಿ 10 ಸ್ಯಾಟಲೈಟ್ಗಳ ಉಡಾವಣೆ ಯಶಸ್ವಿಯಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಉಡಾವಣೆಗೊಂಡಿದ್ದು, ಎಲ್ಲ ಉಪಗ್ರಹಗಳು ಯಶಸ್ವಿಯಾಗಿ ತಮ್ಮ ತಮ್ಮ ಕಕ್ಷೆ ಸೇರಿಕೊಂಡಿವೆ.
ಮಿಷನ್ ಯಶಸ್ವಿಯಾಗುತ್ತಿದ್ದಂತೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಕೆ.ಸಿವನ್, ಯೋಜನೆಯ ಯಶಸ್ವಿಗೋಸ್ಕರ ಕೆಲಸ ಮಾಡಿರುವ ಎಲ್ಲ ಸಿಬ್ಬಂದಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಈ ಹಿಂದಿನ ಯೋಜನೆಗಳಿಗಿಂತಲೂ ಈ ಯೋಜನೆ ನಮಗೆ ವಿಶೇಷವಾಗಿತ್ತು ಎಂದಿರುವ ಸಿವನ್, ಕೊರೊನಾ ಹಾವಳಿ ನಡುವೆ ನಾವು ಈ ಕೆಲಸ ಮಾಡಿದ್ದೇವೆ ಎಂದಿದ್ದಾರೆ.
ಬೇರೆ ಕೆಲಸಗಳ ರೀತಿಯಲ್ಲಿ ಕೊರೊನಾ ವೈರಸ್ ಹಾವಳಿ ಸಂದರ್ಭದಲ್ಲಿ ನಾವು ಮನೆಯಲ್ಲಿ ಕುಳಿತುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಎಲ್ಲ ಸಿಬ್ಬಂದಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ಈ ಮಿಷನ್ನಲ್ಲಿ ಪ್ರತಿಯೊಬ್ಬರು ಯಶಸ್ವಿಯಾಗಿ ಕೆಲಸ ಮಾಡಿದ್ದು, ಅದರ ಫಲವಾಗಿ ನಾವು ಸಫಲರಾಗಿದ್ದೇವೆ ಎಂದರು.
ಇಸ್ರೋದಿಂದ ಇತಿಹಾಸ ಸೃಷ್ಟಿ: ಭೂವೀಕ್ಷಣೆ ಉಪಗ್ರಹ ಸೇರಿ 10 ಸ್ಯಾಟಲೈಟ್ ಯಶಸ್ವಿ ಉಡಾವಣೆ ವಿಡಿಯೋ
ಕೋವಿಡ್ ಮಾರ್ಗಸೂಚಿ ಬಳಸಿಕೊಂಡು ನಾವು ಕೆಲಸ ಮಾಡಿದ್ದು, ಕೆಲಸ ಹಾಗೂ ಗುಣಮಟ್ಟದ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಂಡಿಲ್ಲ ಎಂದಿದ್ದಾರೆ. ಇಸ್ರೋ ಉದ್ಯೋಗಿಗಳು ಗುಣಮಟ್ಟದ ಕೆಲಸ ಮಾಡುತ್ತಿರುವುದು ನಿಜಕ್ಕೂ ಹೃದಯಸ್ಪರ್ಶಿ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ದೀಪಾವಳಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಇಸ್ರೋ ಉಪಗ್ರಹಗಳ ಉಡಾವಣೆ ಮಾಡಿದ್ದು, ದೇಶದ ಜನರಲ್ಲಿ ಸಂಭ್ರಮ ಮತ್ತಷ್ಟು ಇಮ್ಮಡಿಗೊಳಿಸಿದೆ ಎಂದು ತಿಳಿಸಿದ್ದಾರೆ.