ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಪ್ರೋತ್ಸಾಹದಿಂದಾಗಿ ಅಸ್ಸಾಂ ಮುಖ್ಯಮಂತ್ರಿ ಸರಬಾನಂದ ಸೋನೋವಾಲ ಅವರು ಇಸ್ರೇಲ್ ಜೊತೆಗೆ ಸಂಬಂಧವೃದ್ಧಿಯ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಫಲ ನೀಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್‌ನ ಹಲವು ರಾಯಭಾರ ಅಧಿಕಾರಿಗಳು ಈಶಾನ್ಯ ರಾಜ್ಯವಾದ ಅಸ್ಸಾಂಗೆ ಭೇಟಿ ನೀಡಿದ್ದರು. ಈಗ ಶೀಘ್ರದಲ್ಲೇ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಇಸ್ರೇಲ್ ಗೌರವಯುತ ರಾಯಭಾರ ಕಚೇರಿಯನ್ನು ಸ್ಥಾಪಿಸಲಿದೆ.
ಇತ್ತೀಚೆಗಷ್ಟೇ ನಾವು ಇಸ್ರೇಲ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಶೀಘ್ರದಲ್ಲೇ ಅಸ್ಸಾಂನಲ್ಲಿ ಗೌರವಯುತ ರಾಯಭಾರ ಕಚೇರಿಯನ್ನು ಇಸ್ರೇಲ್ ಸ್ಥಾಪಿಸಲಿದೆ ಎಂದು ಸಿಎಂ ಸೋನೋವಾಲ ಮಂಗಳವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಕೃಷಿ ತಂತ್ರಜ್ಞಾನ, ನೀರು ನಿರ್ವಹಣೆ ವ್ಯವಸ್ಥೆ, ಪ್ರವಾಸೋದ್ಯಮ ಇತರ ವಲಯಗಳಲ್ಲಿ ಇಸ್ರೇಲ್ ಉತ್ತಮ ಸಾಧನೆ ಮಾಡಿದೆ. ಇಸ್ರೇಲ್ ಜೊತೆಗೆ ಮಾತನಾಡಿ ಎಂದು ಪ್ರಧಾನಿ ನಮಗೆ ಸಲಹೆ ಮಾಡಿದ್ದರು. ಅದರಂತೆ ನಾವು ಅವರೊಂದಿಗೆ ಚರ್ಚೆ ನಡೆಸಿದ್ದೆವು ಎಂದು ಅವರು ಹೇಳಿದ್ದಾರೆ.
ಗುವಾಹಟಿಯಲ್ಲಿ ಈಗಾಗಲೇ ಬಾಂಗ್ಲಾದೇಶ ಮತ್ತು ಭೂತಾನ್ ರಾಯಭಾರ ಕಚೇರಿಗಳಿವೆ. ಈ ಎರಡೂ ದೇಶಗಳೊಂದಿಗೆ ಅಸ್ಸಾಂ ಗಡಿ ಹಂಚಿಕೊಂಡಿದೆ. ಆದರೆ ಇಸ್ರೇಲ್ ಜೊತೆಗೆ ರಾಯಭಾರ ಸಂಬಂಧವನ್ನು ಅಸ್ಸಾಂ ಸ್ಥಾಪಿಸಿರುವುದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಇನ್ನೊಂದೆಡೆ, ಮುಂಬೈ ಮತ್ತು ಬೆಂಗಳೂರಿನ ಜೊತೆಗೆ ನವದೆಹಲಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿಯನ್ನು ಹೊಂದಿದೆ. ಗೌರವಯುತ ರಾಯಭಾರ ಕಚೇರಿಗಳನ್ನು ಉಭಯ ದೇಶಗಳ ಆರ್ಥಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಬಂಧ ಸುಧಾರಣೆಗೆ ಸ್ಥಾಪಿಸಲಾಗುತ್ತದೆ. ಅಷ್ಟೇ ಅಲ್ಲ, ದೇಶಗಳು ಮತ್ತು ಅದರ ನಾಗರಿಕರ ಹಿತಾಸಕ್ತಿಯನ್ನು ರಕ್ಷಿಸಲೂ ರಾಯಭಾರ ಕಚೇರಿ ಸ್ಥಾಪಿಸಲಾಗುತ್ತದೆ. ಆದರೆ, ಸನ್ನಿವೇಶಕ್ಕೆ ಅನುಗುಣವಾಗಿ ಗೌರವಯುತ ರಾಯಭಾರ ಕಚೇರಿಯ ಉದ್ದೇಶದ ವ್ಯಾಪ್ತಿಯನ್ನು ವಿಸ್ತರಿಸಬಹುದು. ಒಳ ನುಸುಳುವಿಕೆ ತಡೆ ಕಾರ್ಯನಿರ್ವಹಣೆ ಮತ್ತು ಗುಪ್ತಚರ ಮಾಹಿತಿ ಸಂಗ್ರಹ ತಂತ್ರಗಳ ವಿಚಾರಗಳಲ್ಲಿ ಇಸ್ರೇಲ್ ಅತ್ಯುನ್ನತ ಮಟ್ಟದಲ್ಲಿದೆ. ಚೀನಾ ಸೇರಿದಂತೆ ವಿದೇಶಗಳ ಗಡಿಗಳನ್ನು ಹಂಚಿಕೊಂಡಿರುವ ಈಶಾನ್ಯ ರಾಜ್ಯಗಳ ಬಗ್ಗೆ ಇಸ್ರೇಲ್ ಆಸಕ್ತಿ ವಹಿಸಿರುವುದು ಅತ್ಯಂತ ಪ್ರಮುಖವಾಗಿದೆ.
ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಮುಸ್ಲಿಮೇತರರಿಗೆ ಶೀಘ್ರವಾಗಿ ಪೌರತ್ವ ಒದಗಿಸುವ ಪೌರತ್ವ ಕಾಯ್ದೆಯ ವಿರುದ್ಧವಾಗಿ ವ್ಯಾಪಕವಾಗಿ ಪ್ರತಿಭಟನೆ ನಡೆಯುತ್ತಿದ್ದು, ಅಸ್ಸಾಂ ಈಗ ಶಾಂತಿ ರಹಿತ ರಾಜ್ಯವಾಗಿ ಪರಿಣಮಿಸಿದೆ. 2011 ಜನಗಣತಿಯ ಪ್ರಕಾರ 1,06,00,000 ಮುಸ್ಲಿಮರು ಅಸ್ಸಾಂನಲ್ಲಿದ್ದಾರೆ. ಅಂದರೆ ರಾಜ್ಯದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇ. 34.22 ರಷ್ಟಿದ್ದಾರೆ. 2019 ಆಗಸ್ಟ್ 5 ರಂದು ಜಮ್ಮು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾದ ನಂತರ ಭಾರತದಲ್ಲಿ ಅತಿ ಹೆಚ್ಚಿನ ಶೇಕಡಾವಾರು ಮುಸ್ಲಿಮರಿರುವ ರಾಜ್ಯ ಅಸ್ಸಾಂ ಆಗಿದೆ.