ಮುಂಬೈ (ಮಹಾರಾಷ್ಟ್ರ): ಕೊರೊನಾ ಪೀಡಿತ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವಂತೆ ಘೋಷಿಸಿದ ಕೇಂದ್ರದ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಕುರಿತು ಶಿವಸೇನಾ ಪಕ್ಷ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದೆ. ಭಾರತ ಪ್ರಸ್ತುತ ಸ್ವಾವಲಂಬಿ ದೇಶವಲ್ಲವೇ ಎಂದು ಪ್ರಶ್ನಿಸಿದೆ.
ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳನ್ನು ಹೇಗೆ ಸಂಗ್ರಹಿಸಲಾಗುವುದು, ಅದರ ದಾರಿಯಾದರೂ ಯಾವುದು ಎಂದು ಶಿವಸೇನಾ ಪ್ರಶ್ನಿಸಿದೆ. ಕೈಗಾರಿಕೋದ್ಯಮಿಗಳು, ವ್ಯಾಪಾರ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುವಂತಹ ವಾತಾವರಣವನ್ನು ಸೃಷ್ಟಿಸುವ ಅಗತ್ಯತೆ ಕೇಂದ್ರ ಸರ್ಕಾರಕ್ಕಿದೆ ಎಂದೂ ಅಭಿಪ್ರಾಯಪಟ್ಟಿದೆ.
ಈ ವಿಶೇಷ ಪ್ಯಾಕೇಜ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಬಡ ಕಾರ್ಮಿಕರು, ರೈತರು ಮತ್ತು ತೆರಿಗೆ ಪಾವತಿಸುವ ಮಧ್ಯಮ ವರ್ಗದವರಿಗೆ ಪ್ರಯೋಜನಕಾರಿಯಾಗಲಿದೆ ಎಂದು ದೇಶಕ್ಕೆ ತಿಳಿಸಲಾಗುತ್ತಿದೆ ಎಂದು ಸೇನೆ ಹೇಳಿದೆ.
ಕೇಂದ್ರ ಸರ್ಕಾರದ ಪ್ರಕಾರ ಈ ಪ್ಯಾಕೇಜ್ 130 ಕೋಟಿ ಭಾರತೀಯರನ್ನು ತಲುಪುತ್ತದೆ ಹಾಗೂ ನಮ್ಮ ದೇಶವು ಸ್ವಾವಲಂಬಿಯಾಗಲಿದೆ. ಇದರರ್ಥ ಭಾರತವು ಪ್ರಸ್ತುತ ಸ್ವಾವಲಂಬಿ ದೇಶವಲ್ಲವೇ?, ಈ ಹಿಂದೆ ಸ್ವಾವಲಂಬಿಯಾಗಿ ನಮ್ಮ ದೇಶ ಇರಲಿಲ್ಲವೇ ಎಂದು ಕೆಂದ್ರಕ್ಕೆ ಸೇನೆ ಇದೇ ವೇಳೆ ಪ್ರಶ್ನೆ ಮಾಡಿದೆ.
ಎಲ್ಲ ದೇಶಗಳು ಸಹ ಬಿಕ್ಕಟ್ಟಿನಿಂದ ಮತ್ತು ಹೋರಾಟದ ಮೂಲಕ ಕಲಿಯುವುದರಿಂದಲೇ ಮುಂದುವರಿಯುತ್ತದೆ. ಸ್ವಾತಂತ್ರ್ಯದ ಮೊದಲು ಭಾರತದಲ್ಲಿ ಸೂಜಿಯನ್ನು ಸಹ ತಯಾರಿಸುತ್ತಿರಲಿಲ್ಲ. ಆದರೆ, 60 ವರ್ಷಗಳಲ್ಲಿ ಭಾರತವು ವಿಜ್ಞಾನ, ತಂತ್ರಜ್ಞಾನ, ಕೃಷಿ ವ್ಯವಹಾರ, ರಕ್ಷಣಾ, ಉತ್ಪಾದನೆ ಮತ್ತು ಪರಮಾಣು ವಿಜ್ಞಾನದಲ್ಲಿ ಸ್ವಾವಲಂಬಿಗಳಾಗಿದೆ.