ಅತ್ಯಂತ ಕಡುಕಷ್ಟದ ಸಮಯದಲ್ಲೂ ಇಡೀ ದೇಶಕ್ಕೆ ಆಹಾರದ ಕೊರತೆ ಎದುರಾಗದೇ ದೇಶದ ಪ್ರಜೆಗಳೆಲ್ಲರೂ ನೆಮ್ಮದಿಯಿಂದ ಇರುವಂತಾಗಿರುವುದಕ್ಕೆ ಮುಖ್ಯ ಕಾರಣ ಈ ದೇಶದ ರೈತಾಪಿ ವರ್ಗವು ಬಿಕ್ಕಟ್ಟಿನ ಸಮಯದಲ್ಲೂ ಹಗಲು ರಾತ್ರಿಯೆನ್ನದೇ ನೇಗಿಲು ಮತ್ತು ಎತ್ತುಗಳನ್ನು ಬಿಡದೇ ರಾಷ್ಟ್ರದ ಬೆನ್ನೆಲುಬಾಗಿ ಸ್ಥಿರವಾಗಿ ನಿಂತಿರುವುದೇ ಆಗಿದೆ. ಕೇಂದ್ರ ಸರ್ಕಾರವು ಕೋವಿಡ್ ನಷ್ಟಕ್ಕೆ ಒಳಗಾದ ಹಲವಾರು ಕ್ಷೇತ್ರಗಳಿಗೆಂದು ಆತ್ಮನಿರ್ಭರ್ ಪ್ಯಾಕೇಜನ್ನು ಘೋಷಿಸಿತು. ಆದರೆ ದೇಶದ ಎಲ್ಲಕ್ಕಿಂತ ಮಿಗಿಲಾದ ಅನ್ನ ನೀಡುವ ರೈತನ ವಿಷಯದಲ್ಲಿ ಆತನ ಏಳಿಗೆ ಮತ್ತು ಉಳಿವಿಗೆ ಮಾರಕವಾದ ನೀತಿಯನ್ನು ಸರ್ಕಾರ ಅನುಸರಿಸುತ್ತಿರುವುದು ಅಕ್ಷಮ್ಯ.
ಎರಡು ವರ್ಷಗಳ ಹಿಂದಿನ ಕೃಷಿ ಸಮೀಕ್ಷೆ ತೋರಿಸುವ ಪ್ರಕಾರ ದೇಶಾದ್ಯಂತ ಶೇಕಡಾ 86.2 ರಷ್ಟು ರೈತರು ಸಣ್ಣ ಭೂಹಿಡುವಳಿ ಹೊಂದಿದವರಾಗಿದ್ದು, ಎರಡು ಹೆಕ್ಟೇರಿಗಿಂತಲೂ ಕಡಿಮೆ ಜಮೀನು ಹೊಂದಿದ್ದಾರೆ. 12 ಕೋಟಿ 60 ಲಕ್ಷ ರೈತರು ತಲಾ 0.6 ಹೆಕ್ಟೇರ್ ಗಳಷ್ಟು ಉಳುಮೆ ಯೋಗ್ಯ ಭೂಮಿಯನ್ನು ಮಾತ್ರ ಹೊಂದಿದ್ದಾರೆ. ಕನಿಷ್ಠ ಬೆಂಬಲ ಬೆಲೆಯ ಹೆಸರಿನಲ್ಲಿ ನಡೆಯುವ ರೈತರ ಶೋಷಣೆ ಎನ್ನುವುದು ಕೆಲವು ದಶಕಗಳಿಂದ ಮೇರೆ ಮೀರಿದೆ. ಕೃಷಿ ಮಾರುಕಟ್ಟೆಗಳಲ್ಲಿನ ಮಧ್ಯವರ್ತಿಗಳ ವಂಚನೆ ಅಸಹಾಯಕ ರೈತರ ಹಿತಾಸಕ್ತಿಯನ್ನು ಗಂಭೀರ ಸ್ವರೂಪದಲ್ಲಿ ಶೋಷಿಸುತ್ತಿದೆ. ಆ ಒಂದು ಅಸಂಘಟಿತ ವ್ಯವಸ್ಥೆಯನ್ನು ಎದುರಿಸಲು ಕೇಂದ್ರವು ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಿದೆ. ಅದರ ಮೂಲಕ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ತಾವೇ ಮಾರಿಕೊಂಡು ಆಕರ್ಷಕ ಬೆಲೆ ಪಡೆಯಲು ಅದರಲ್ಲಿ ಅವಕಾಶ ನೀಡಿತು. ಆದರೆ ಎಂತಹ ವಿಪರ್ಯಾಸವೆಂದರೆ ಇದೇ ವೇಳೆಯಲ್ಲೇ ಸರ್ಕಾರ ಮಂಡಿಸಿರುವ ಮತ್ತೊಂದು ಮಸೂದೆಯ ಮೂಲಕ ವ್ಯಾಪಾರಿಗಳು ಮತ್ತು ರೈತರ ನಡುವೆ ಬೆಳೆಯ ಕಟಾವಿಗೂ ಮುಂಚಿತವಾಗಿ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಇದು ವ್ಯಾಪಾರಿಗೆ ಲಾಭ ಭದ್ರತೆ ನೀಡಿ ರೈತನ ಕೈಕಟ್ಟಿ ಹಾಕುತ್ತದೆ. ದೂರದೃಷ್ಟಿಯಿಲ್ಲದ ಈ ಮಸೂದೆಯ ಸಮಸ್ಯೆ ಏನೆಂದರೆ ಅದು ತಳಮಟ್ಟದಲ್ಲಿನ ವಾಸ್ತವತೆಗೆ ವಿರುದ್ಧವಾಗಿದೆ. ಮಾರುಕಟ್ಟೆ ಶಕ್ತಿಗಳ ನಡುವೆ ಪೈಪೋಟಿ ಏರ್ಪಟ್ಟು ಅದರಿಂದ ಬೆಳೆಗಳಿಗೆ ಯೋಗ್ಯವಾದ ಬೆಲೆ ನಿಗದಿಗೆ ದಾರಿ ಮಾಡಿಕೊಟ್ಟು ಇದು ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತದೆ ಎಂದು ಈ ಮಸೂದೆಯ ಮೂಲಕ ನಿರೀಕ್ಷಿಸಲಾಗಿದೆ. ಆದರೆ ನಿಜ ಜೀವನದ ಪರಿಸ್ಥಿತಿಗಳಿರುವುದೇ ಬೇರೆ. ಅಲ್ಲಿ ಬೀಜ ಕೊಳ್ಳಲು ಮತ್ತು ನಂತರದಲ್ಲಿ ಬೆಳೆ ಬೆಳೆಯಲು ಆರಂಭದಲ್ಲೇ ಹಣದ ತೀವ್ರ ಅಗತ್ಯತೆ ಎದುರಿಸುವ ಬಡ ರೈತ, ಬೇರೆ ವಿಧಿಯಿಲ್ಲದೇ ಸೀದಾ ವ್ಯಾಪಾರಿಯ ಬಳಿ ಹೋಗಿ ಲಾಭದಾಯಕವಲ್ಲದ ಹಣ ಪಡೆದುಕೊಂಡು, ಸುಗ್ಗಿಯ ನಂತರದಲ್ಲಿ ಪೂರಾ ಬೆಳೆಯನ್ನು ಆ ವ್ಯಾಪಾರಿಗೇ ಒಪ್ಪಿಸುವುದಾಗಿ ಒಪ್ಪಂದ ಮಾಡಿಕೊಂಡು ಬರುತ್ತಾನೆ. ಒಂದೊಮ್ಮೆ ಸುಗ್ಗಿಯಲ್ಲಿ ಅಧಿಕ ಫಸಲು ಬಂದಿದ್ದರೂ ಅದರಿಂದ ಆ ರೈತನಿಗೆ ಏನೂ ಪ್ರಯೋಜನವಾಗುವುದಿಲ್ಲ. ತಾನು ಬೆಳೆದ ಅಷ್ಟೂ ಬೆಳೆಯನ್ನು ಈ ಮುಂಚಿನ ಒಪ್ಪಂದಕ್ಕೆ ಅನುಗುಣವಾಗಿ ವ್ಯಾಪಾರಿ ಹೇಳಿದ ಬೆಲೆಗೆ ಒಪ್ಪಿಸಿ ಬರುತ್ತಾನೆ. ರಾಷ್ಟ್ರದ ಆಹಾರ ಭದ್ರತೆಗೆ ಕಾರಣರಾಗಿರುವ ರೈತರ ಕಲ್ಯಾಣವನ್ನು ಖಾತ್ರಿಗೊಳಿಸಬೇಕಾಗಿದ್ದ ಸರ್ಕಾರ ಈ ರೀತಿಯಲ್ಲಿ ಅನ್ನದಾತನನ್ನು ಮಾರುಕಟ್ಟೆ ಶಕ್ತಿಗಳ ಆಟಕ್ಕೆ ಬಲಿಯಾಗುವಂತೆ ಮಾಡಿರುವುದು ಮಾತ್ರ ಆಘಾತವನ್ನುಂಟು ಮಾಡುವ ಸಂಗತಿಯಾಗಿದೆ.