ಹೈದರಾಬಾದ್: ಕೊರೊನಾ ಸಾಂಕ್ರಾಮಿಕ ರೋಗದಿಂದ ಸದ್ಯ ಇಡೀ ದೇಶ ಭಾರಿ ವಿಪತ್ತಿನಲ್ಲಿ ಸಿಲುಕಿರುವಾಗ ದೇಶವನ್ನು “ಆತ್ಮ ನಿರ್ಭರ ಭಾರತ”ವನ್ನಾಗಿಸುತ್ತೇನೆ ಎಂದು ಘೋಷಿಸಿರುವುದು ಇಡೀ ದೇಶದಲ್ಲಿ ಹೊಸ ಆಶಾಕಿರಣವನ್ನು ಹುಟ್ಟುಹಾಕಿದೆ. ಕೊರೊನಾ ವೈರಸ್‌ನಿಂದಾಗಿ ಉತ್ಪಾದಕತೆ, ಉದ್ಯೋಗಾವಕಾಶ ಮತ್ತು ಎಲ್ಲ ಇತರ ವಲಯಗಳು ಹಲವು ದೇಶಗಳಲ್ಲಿ ತಳಮಟ್ಟ ಕಂಡಿದ್ದು, ಅವೆಲ್ಲವೂ ತಮ್ಮ ಆರ್ಥಿಕತೆಗೆ ಚೇತರಿಕೆ ನೀಡಲು ಪ್ಯಾಕೇಜ್‌ಗಳನ್ನು ಘೋಷಿಸಿವೆ.
ಪ್ರಸ್ತುತ ಪ್ಯಾಕೇಜ್‌ನಲ್ಲಿ ಏನೇನು ಇರಬೇಕು ಎಂಬುದಕ್ಕೆ ವಿವಿಧ ವಲಯ ಜನರು ಮತ್ತು ಪರಿಣಿತರು ಹಲವು ಸಲಹೆಗಳನ್ನು ಭಾರತ ಸರ್ಕಾರಕ್ಕೆ ನೀಡಿದ್ದಾರೆ. ಕೋವಿಡ್ ಸಮಯದಲ್ಲಿನ ವಿಪತ್ತನ್ನು ಸ್ವಾವಲಂಬನೆಯ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಅನ್ನು ರೂಪಿಸಲಾಗಿದೆ ಎಂದು ಕೆಲವೇ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಐದು ಪ್ರಮುಖ ಆಧಾರ ಸ್ತಂಭದಲ್ಲಿ ಭಾರತವು ಸ್ವಾವಲಂಬಿಯಾಗುವ ಪ್ರಸ್ತಾವನೆಯನ್ನು ಅವರು ಘೋಷಿಸಿದ್ದಾರೆ. ಸಮಗ್ರ ಆರ್ಥಿಕ, ಮೂಲಸೌಕರ್ಯ ಮತ್ತು ಸಾಂಸ್ಥಿಕ ಸುಧಾರಣೆ, ಯುವ ಶಕ್ತಿಯನ್ನು ಸಶಕ್ತಗೊಳಿಸುವುದು ಮತ್ತು ಬೇಡಿಕೆ ಮತ್ತು ಪೂರೈಕೆ ಸರಣಿಯನ್ನು ಸುಸ್ಥಿರಗೊಳಿಸುವುದು ಇದರಲ್ಲಿ ಒಳಪಟ್ಟಿದೆ.
ಇದಕ್ಕೆ ಅನುಗುಣವಾಗಿ ಐದು ಹಂತದ ಪ್ಯಾಕೇಜ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಆದರೆ ಪ್ರಸ್ತುತ ಸಮಸ್ಯೆಗೆ ಯಾವುದೇ ಸ್ಪಷ್ಟ ಪರಿಹಾರ ಲಭ್ಯವಾಗಲಿಲ್ಲ. ಜಿಡಿಪಿಯ ಶೇ.10ರಷ್ಟನ್ನು ಹೊಂದಿರುವ 20.97 ಲಕ್ಷ ಕೋಟಿ ರೂ. ಪ್ಯಾಕೇಜ್ ಆಕರ್ಷಕವಾಗಿ ಕಂಡರೂ, ಇದು ಸರ್ಕಾರದ ಬೊಕ್ಕಸಕ್ಕೆ ಕೇವಲ ಶೇ. 1.1 ರಷ್ಟು ಅಂದರೆ, 2.17 ಲಕ್ಷ ಕೋಟಿ ರೂ. ಹೊರೆಯಾಗಲಿದೆ. ಆರ್ಥಿಕ ವಲಯದ ಹಲವು ಅಂಗಗಳು ಸಮಸ್ಯೆಯನ್ನು ಹೊಂದಿದ್ದರೂ, ಪ್ರಮುಖ ಉದ್ಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದರೆ ಎಂಎಸ್‌ಎಂಇಗಳಿಗೆ ಕೆಲವು ಅನುಕೂಲಗಳನ್ನು ಕಲ್ಪಿಸಲಾಗಿದೆ. ಕೊರೊನಾದಿಂದ 130 ಕೋಟಿ ಭಾರತೀಯರಿಗೆ ಉಂಟಾದ ಸಮಸ್ಯೆಯನ್ನು ಹೇಗೆ ಪರಿಹಾರ ಮಾಡಲಾಗುತ್ತದೆ ಎಂಬುದನ್ನು ಪ್ರಸ್ತುತ ಪ್ಯಾಕೇಜ್ ದೃಷ್ಟಿಕೋನದಿಂದ ನಾವು ನೋಡಬೇಕಿದೆ.