ಗ್ವಾಲಿಯರ್:ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕರುಗಳಗ ಹೇಳಿಕೆಗಳಿಗೆ ಬಿಜೆಪಿಯ ರಾಜ್ಯಸಭಾ ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ ಟಕ್ಕರ್ ಕೊಟ್ಟಿದ್ದಾರೆ.
ಕಾಂಗ್ರೆಸ್ ನಾಯಕರ ಆರೋಪಗಳ ಕುರಿತು ಗ್ವಾಲಿಯರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೆಗಳು ಮುಂದಿರುವಾಗ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಈ ಆರೋಪಗಳು ನಿರಾಧಾರ. ಉಪಚುನಾವಣೆ ಗುರಿಯಾಗಿಟ್ಟುಕೊಂಡು ತಮ್ಮ ಮೇಲೆ ಇಲ್ಲ - ಸಲ್ಲದ ಆರೋಪ ಮಾಡುತ್ತಿದ್ದಾರೆ. ಭೂ - ಕಬಳಿಕೆ ಮಾಡಿದ್ದಾರೆ ಎಂಬ ಹಣೆಪಟ್ಟಿ ಕಟ್ಟಿ ರಾಜಕೀಯವಾಗಿ ತಮ್ಮನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ.
ನನ್ನ ಬಳಿ ಇರುವ ಆಸ್ತಿ ಭೂ - ಕಬಳಿಕೆ ಮಾಡಿ ಗಳಿಸಿದ್ದಲ್ಲ, ಅದು ರಾಜಮನೆತನಕ್ಕೆ ಸೇರಿದ ಆಸ್ತಿ. ಅದಕ್ಕೆ 300 ವರ್ಷಗಳ ಇತಿಹಾಸವಿದೆ. ತಾವು ಯಾವುದೇ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿಲ್ಲ ಎಂದಿರುವ ಜ್ಯೋತಿರಾಧಿತ್ಯ ಸಿಂಧಿಯಾ, ತಾವು ರಾಯಮನೆತನಕ್ಕೆ ಸೇರಿದ್ದೇ ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಬಳಿಕ ಪ್ರತಿಪಕ್ಷಗಳಿಂದ ನಿರಂತರವಾಗಿ ಆರೋಪಗಳಿಗೆ ತುತ್ತಾಗುತ್ತಿರುವ ಜ್ಯೋತಿರಾಧಿತ್ಯ ಸಿಂಧಿಯಾ ಇಂದು ಮೌನ ಮುರಿದು ಈ ರೀತಿಯ ಹೇಳಿಕೆ ನೀಡಿದ್ದಾರೆ. ಗ್ವಾಲಿಯರ್ನ ಸಿಂಧಿಯಾ ಟ್ರಸ್ಟ್ ಮೂಲಕ ತನ್ನ ಹೆಸರಿನಲ್ಲಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಮೂಲಕ ಜ್ಯೋತಿರಾದಿತ್ಯ ಸಿಂಧಿಯಾ ಭೂ-ಕಬಳಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ.