ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಸುದ್ದಿವಾಹಿನಿಯೊಂದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯನ್ಯಾಯಮೂರ್ತಿ ದೀಪಾಂಕರ್ ದತ್ತಾ, ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ, ಅವರಿದ್ದ ನ್ಯಾಯಪೀಠ ಸುದ್ದಿವಾಹಿನಿ ನಡೆಸುತ್ತಿದ್ದ ಹ್ಯಾಷ್ಟ್ಯಾಗ್ ಕ್ಯಾಂಪೇನ್ ಹಾಗೂ ಕೆಲವು ವರದಿಗಳಿಗೆ ಸಂಬಂಧಿಸಿದಂತೆ ತರಾಟೆ ತೆಗೆದುಕೊಂಡಿದೆ.
ಸುದ್ದಿವಾಹಿನಿಯ #ArrestRhea ಹ್ಯಾಷ್ಟ್ಯಾಗ್ ಅನ್ನು ಬಾಂಬೆ ಹೈಕೋರ್ಟ್ ಉಲ್ಲೇಖಿಸಿದ್ದು, ಈ ಹ್ಯಾಷ್ಟ್ಯಾಗ್ ಸುದ್ದಿವಾಹಿನಿಯ ಭಾಗವಾಗಿದ್ದು ಏಕೆ? ಎಂದು ಕೇಳಿದೆ. ಇದರ ಜೊತೆಗೆ ಸುದ್ದಿ ವಾಹಿನಿ ಏಕೆ ಸುಶಾಂತ್ ಅವರ ಮೃತದೇಹದ ಚಿತ್ರಗಳನ್ನು ಪ್ರಕಟಿಸುತ್ತಿದೆ? ಎಂದು ಪ್ರಶ್ನಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಊಹಾಪೋಹಗಳನ್ನು ಹರಿಯಬಿಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಸುಶಾಂತ್ ಸಾವಿನ ತನಿಖೆ ಪ್ರಗತಿಯಲ್ಲಿರುವಾಗ, ಸುಶಾಂತ್ ಸಾವು ಹತ್ಯೆಯೋ? ಅಥವಾ ಆತ್ಮಹತ್ಯೆಯೋ? ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿರುವಾಗ ಸುದ್ದಿವಾಹಿನಿ ಇದು ಕೊಲೆ ಎಂದು ಹೇಳುತ್ತಿದೆ. ಇದೇನಾ ತನಿಖಾ ಪತ್ರಿಕೋದ್ಯಮ ? ಎಂದು ಗಂಭೀರವಾಗಿ ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದ್ದಿ ವಾಹಿನಿ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಮಾಡಲಾದ ಕೆಲವು ವರದಿಗಳು ಪೊಲೀಸರ ತನಿಖೆಗೆ ಸಹಕಾರಿಯಾಗಿವೆ ಎಂದು ಕೋರ್ಟ್ಗೆ ಹೇಳಿದೆ.
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸುವ ವೇಳೆ ಈ ರೀತಿಯ ಹೇಳಿಕೆಯನ್ನು ಸುದ್ದಿ ವಾಹಿನಿ ನೀಡಿದೆ. ಅಷ್ಟೇ ಅಲ್ಲ ಸುಶಾಂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೋದ್ಯಮದ ನೀತಿ ಸಂಹಿತೆಯನ್ನು ಕಾಪಾಡಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟೀಕರಿಸಿದೆ.