ಈಗಾಗಲೇ 2020-21ರ ಮುಂಗಾರು ಅವಧಿಯ 14 ಕ್ಕೂ ಹೆಚ್ಚು ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ. ಬೆಳೆಯ ಉತ್ಪಾದನೆ ವೆಚ್ಚಕ್ಕಿಂತ ಶೇಕಡಾ 50ರಷ್ಟು ಬೆಂಬಲ ಬೆಲೆ ಇದೆ ಎಂದೂ ಸರ್ಕಾರ ಹೇಳಿಕೊಂಡಿದೆ. ಆದರೆ, ವಾಸ್ತವ ಸನ್ನಿವೇಶ ಬೇರೆಯೇ ಇದೆ. ಕೆಲವು ಬೆಳೆಗಳಿಗೆ, ಬೆಂಬಲ ಬೆಲೆ ಘೋಷಣೆ ಮಾಡಲೇ ಇಲ್ಲ. ಅಷ್ಟಕ್ಕೂ, ಹಲವು ಹಣಕಾಸು ಪರಿಣಿತರ ಪ್ರಕಾರ ಸ್ವಾಮಿನಾಥನ್ ಆಯೋಗವು ಮಾಡಿದ ಶಿಫಾರಸಿಗೂ ಮತ್ತು ಸರ್ಕಾರ ಘೋಷಿಸಿದ ಬೆಂಬಲ ಬೆಲೆಗೂ ಯಾವುದೇ ಹೋಲಿಕೆ ಮಾಡಲೂ ಸಾಧ್ಯವಿಲ್ಲ.
2020-21ರ ಮುಂಗಾರು ಬೆಳೆ ಅವಧಿಗೆ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಎಲ್ಲ ಬೆಳೆಯ ಬೆಂಬಲ ಬೆಲೆಯನ್ನು ಕಳೆದ ವರ್ಷಕ್ಕಿಂತ ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಒಟ್ಟಾರೆಯಾಗಿ ಈ ಬೆಲೆಯು ಬೆಳೆಯ ಉತ್ಪಾದನೆ ವೆಚ್ಚಕ್ಕಿಂತ ಶೇ. 50 ರಷ್ಟು ಹೆಚ್ಚಾಗಿದೆ ಎಂದೂ ಸರ್ಕಾರ ಹೇಳಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಕೃಷಿ ಹೆಚ್ಚು ಆಕರ್ಷಕ ವಿದ್ಯಮಾನವಾಗಲಿದೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ. ಆದರೆ, ಈಗ ಘೋಷಿಸಿದ ಬೆಂಬಲ ಬೆಲೆಯು ಸ್ವಾಮಿನಾಥನ್ ಕಮಿಷನ್ ಮಾಡಿದ ಶಿಫಾರಸಿಗೆ ಅನುಗುಣವಾಗಿಲ್ಲ. ಶಿಫಾರಸಿನ ಪ್ರಕಾರ ರೈತರ ಉತ್ಪಾದನೆ ವೆಚ್ಚಕ್ಕೆ ಇನ್ನೂ ಶೇಕಡಾ 50 ರಷ್ಟು ಕೊಡಬೇಕಾಗಿತ್ತು.
ಕೃಷಿಯಲ್ಲಿ ಉತ್ಪಾದನೆ ವೆಚ್ಚವೇ ಅತ್ಯಂತ ಪ್ರಮುಖ
ಒಂದು ಬೆಳೆ ರೈತರಿಗೆ ಲಾಭಕರವಾಗಬೇಕು ಎಂದಾದರೆ ಬೆಂಬಲ ಬೆಲೆಯನ್ನು ನಿಗದಿಸುವಲ್ಲಿ ಏಳು ಪ್ರಮುಖ ಅಂಶಗಳನ್ನು ಪರಿಗಣಿಸಬೇಕು ಎಂದು ಸಿಎಸಿಪಿ ಹೇಳಿದೆ. ಈ ಪೈಕಿ ಅತ್ಯಂತ ಮಹತ್ವದ್ದೆಂದರೆ ಉತ್ಪಾದನೆ ವೆಚ್ಚವಾಗಿದೆ. ಉತ್ಪಾದನೆ ವೆಚ್ಚವನ್ನು ಲೆಕ್ಕ ಹಾಕುವ ತಾಂತ್ರಿಕತೆಯು ಸರಿಯಾಗಿಲ್ಲದ್ದರಿಂದ, ಕನಿಷ್ಠ ಬೆಂಬಲ ಬೆಲೆ ನಿರ್ಧರಿಸುವ ಪ್ರಕ್ರಿಯೆ ನಿರೀಕ್ಷಿತ ಫಲಿತಾಂಶವನ್ನು ನೀಡುತ್ತಿಲ್ಲ. ಉತ್ಪಾದನೆ ವೆಚ್ಚವನ್ನು ಎಂಟು ವಿಧಾನಗಳಲ್ಲಿ ಸಿಎಸಿಪಿ ಲೆಕ್ಕ ಮಾಡುತ್ತದೆ. ಮೊದಲನೆಯದು ಎ1 ವಿಧದ ಬೆಳೆಗಳು. ಇದರಲ್ಲಿ 14 ವಿವಿಧ ವಿಧಗಳಲ್ಲಿ ರೈತರಿಗೆ ಉಂಟಾಗುವ ವೆಚ್ಚವನ್ನು ಲೆಕ್ಕ ಮಾಡಲಾಗುತ್ತದೆ. ಒಂದು ಕ್ವಿಂಟಾಲ್ ಫಸಲನ್ನು ಬೆಳೆಯಲು ಉಂಟಾಗುವ ವೆಚ್ಚವನ್ನು ಲೆಕ್ಕಹಾಕಲಾಗುತ್ತದೆ. ಎ1 ವಿಧದ ಬೆಳೆಯನ್ನು ಬೆಳೆಯುವಾಗ ತಗಲುವ ವೆಚ್ಚದ ಜೊತೆಗೆ ಭೂಮಿಯನ್ನು ಭೋಗ್ಯಕ್ಕೆ ಪಡೆಯುವ ವೆಚ್ಚವನ್ನೂ ಎ2 ವಿಧದಲ್ಲಿ ಲೆಕ್ಕ ಮಾಡಲಾಗುತ್ತದೆ. ಎ1 ನಾಟಿ ವೆಚ್ಚದ ಜೊತೆಗೆ ಭೂಮಿಯನ್ನು ಹೊರತುಪಡಿಸಿ ಫಿಕ್ಸೆಡ್ ಬಂಡವಾಳ ಸ್ವತ್ತನ್ನು ತೆಗೆದುಕೊಂಡಾಗ ಅದರ ಬಡ್ಡಿ ವೆಚ್ಚವನ್ನು ಬಿ1 ವೆಚ್ಚದಲ್ಲಿ ಸೇರಿಸಲಾಗುತ್ತದೆ. ಬಿ1 ವೆಚ್ಚ ಮತ್ತು ಸ್ವಂತ ಭೂಮಿಯ ಬಾಡಿಗೆ ಮತ್ತು ಭೋಗ್ಯಕ್ಕೆ ಪಡೆದ ಭೂಮಿಯ ಬಾಡಿಗೆಯ ವೆಚ್ಚವನ್ನು ಸೇರಿಸಿ ಬಿ2 ವೆಚ್ಚವನ್ನು ಲೆಕ್ಕ ಹಾಕಲಾಗುತ್ತದೆ. ಬಿ1 ವೆಚ್ಚಕ್ಕೆ ಕುಟುಂಬದ ಕೂಲಿ ವೆಚ್ಚವನ್ನು ಸೇರಿಸಿದಾಗ ನಮಗೆ ಸಿ1 ವೆಚ್ಚ ಸಿಗುತ್ತದೆ ಮತ್ತು ಇದನ್ನು ಬಿ2 ಗೆ ಸೇರಿಸಿದರೆ ಸಿ2 ವೆಚ್ಚ ಸಿಗುತ್ತದೆ. ಮಾರ್ಕೆಟ್ ಅಥವಾ ಕಾನೂನಾತ್ಮಕ ಬೆಲೆ ಪ್ರಕಾರ ಕಾರ್ಮಿಕರ ಕನಿಷ್ಠ ಮೌಲ್ಯವನ್ನು ಸೇರಿಸಿದಾಗ ನಮಗೆ ಸಿ2 ವೆಚ್ಚ ಸಿಗುತ್ತದೆ. ಸಿ2 ವೆಚ್ಚಕ್ಕೆ ಉತ್ಪಾದನೆ ಮತ್ತು ನಿರ್ವಹಣೆಯ ಶೇ. 10 ರಷ್ಟು ವೆಚ್ಚವನ್ನು ಸೇರಿಸಿದಾಗ ನಮಗೆ ಸಿ3 ಉತ್ಪಾದನೆ ವೆಚ್ಚ ಸಿಗುತ್ತದೆ. ಸಿ3 ಉತ್ಪಾದನೆ ವೆಚ್ಚವು ನಿಜವಾಗಿ ಒಂದು ಬೆಳೆಯ ಆರ್ಥಿಕ ಉತ್ಪಾದನೆ ವೆಚ್ಚವಾಗಿರುತ್ತದೆ. ನಾಟಿ ಮತ್ತು ಕೃಷಿಯನ್ನು ಹೊರತುಪಡಿಸಿ, ಉದ್ಯಮದಲ್ಲಿ ಸಾಮಾನ್ಯವಾಗಿ ಸಿ3 ಉತ್ಪಾದನೆ ವೆಚ್ಚ ವಿಧಾನವನ್ನು ಆಧರಿಸಿ ಒಂದು ಉತ್ಪನ್ನದ ಒಟ್ಟು ವೆಚ್ಚವನ್ನು ಕಂಡುಹಿಡಿಯಲಾಗುತ್ತದೆ. ಇದೇ ರೀತಿ, ಕೃಷಿ ಕ್ಷೇತ್ರದಲ್ಲೂ ಕೂಡ ಯಾವುದೇ ಉತ್ಪನ್ನದ ಬೆಲೆಯನ್ನು ಸಿ3 ಉತ್ಪಾದನೆ ವೆಚ್ಚವನ್ನು ಆಧರಿಸಿ ಲೆಕ್ಕ ಮಾಡಬೇಕಾಗುತ್ತದೆ. ಆಗ ಮಾತ್ರ ಮುಂದಿನ ತಲೆಮಾರಿಗೆ ಕೃಷಿಯು ಲಾಭದಾಯಕವಾಗಿರುತ್ತದೆ ಮತ್ತು ರೈತರ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವು ಸಂತೃಪ್ತಿದಾಯಕವಾಗಿರುತ್ತದೆ. ನೇರ ಮತ್ತು ಪರೋಕ್ಷ ವೆಚ್ಚವನ್ನು ಹೊರತುಪಡಿಸಿ ರೈತರಿಗೆ ಉಂಟಾದ ನಿರ್ವಹಣೆ ವೆಚ್ಚವನ್ನು ಒಳಗೊಂಡ ಉತ್ಪಾದನೆ ವೆಚ್ಚವನ್ನು ಬೆಂಬಲ ಬೆಲೆಯು ಹೊಂದಿದ್ದರೆ, ರೈತರು ತಮ್ಮ ಜೀವನ ನಿರ್ವಹಣೆ ಮಾಡಬಹುದು. ಇದೇ ರೀತಿ, 2006ರಲ್ಲಿ ಸಿ2 ಉತ್ಪಾದನೆ ವೆಚ್ಚವನ್ನು ಸ್ವಾಮಿನಾಥನ್ ಆಯೋಗವು ಪರಿಗಣಿಸಿ, ಅದರ ಮೇಲೆ ಶೇ. 50 ರಷ್ಟು ವೆಚ್ಚವನ್ನು ನಿಗದಿಸಬೇಕು ಎಂದು ನಿರ್ಧರಿಸಿತ್ತು.
ಆದರೆ ಕೇಂದ್ರ ಸರ್ಕಾರವು ಇದಕ್ಕೆ ಬದ್ಧವಾಗಿಲ್ಲ. ಎ2 ವೆಚ್ಚವನ್ನು ಮಾತ್ರ ಪರಿಗಣಿಸಿತು. ಅಂದರೆ ಒಟ್ಟು ನಾಟಿ ವೆಚ್ಚದಲ್ಲಿ ತಮ್ಮ ಕುಟುಂಬದ ಕೂಲಿಯನ್ನು ಮಾತ್ರ ಸೇರಿಸಿತು. ಇದರ ಮೇಲೆ, ಶೇ. 50 ರಷ್ಟು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಲಾಯಿತು. ಇದರಿಂದಾಗಿ ರೈತರು ತಮ್ಮ ಭೂಮಿ, ಬಂಡವಾಳ ಮತ್ತು ಮಾಲೀಕತ್ವವನ್ನು ಕಳೆದುಕೊಳ್ಳಲು ಕಾರಣವಾಯಿತು. ಸ್ವಾಮಿನಾಥನ್ ಸಮಿತಿಯು ಶಿಫಾರಸು ಮಾಡಿದ ಬೆಲೆ ನೀತಿಗೆ ಹೋಲಿಸಿದರೆ, ಈಗ ಘೋಷಿಸಿದ ಬೆಂಬಲ ಬೆಲೆಯು ಶೇ. 25 ರಷ್ಟು ಕಡಿಮೆ ಇದೆ. ಇದರಲ್ಲಿ ರೈತರಿಗೆ ಭತ್ತದ ಬೆಳೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 633 ರೂ., ಜೋಳದಲ್ಲಿ ಅಂದಾಜು ರೂ. 790, ತೊಗರಿ ಬೆಳೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ. 2196, ಉದ್ದಿನ ಬೆಳೆಯಲ್ಲಿ ರೂ. 2,355 ಮತ್ತು ಶೇಂಗಾದಲ್ಲಿ ರೂ. 1493 ಮತ್ತು ಹತ್ತಿಯಲ್ಲಿ ಅಂದಾಜು ರೂ. 1888 ನಷ್ಟವಾಗುತ್ತಿದೆ. ಬೆಳೆ ನಾಟಿ ವೆಚ್ಚವನ್ನು ಲೆಕ್ಕ ಮಾಡಲು ಲಭ್ಯವಿರುವ ಮಾದರಿಗಳು ಸರಿ ಇಲ್ಲದ್ದರಿಂದ ಮತ್ತು ಸಾರಿಗೆ, ಮಾರ್ಕೆಟಿಂಗ್ ಮತ್ತು ಉಳುಮೆಯ ವೆಚ್ಚವನ್ನು ಸೇರಿಸಿಲ್ಲದ್ದರಿಂದ, ಸರ್ಕಾರ ಘೋಷಿಸಿದ ಬೆಂಬಲ ಬೆಲೆಯು ನಿಜವಾದ ಬೆಳೆಯ ಬೆಲೆಯನ್ನು ಪ್ರತಿನಿಧಿಸುವುದಿಲ್ಲ. ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೂ ಒಂದೇ ಬೆಂಬಲ ಬೆಲೆಯನ್ನು ಘೋಷಿಸಿದೆ. ಆದರೆ, ಹೆಚ್ಚು ಉತ್ಪಾದನೆ ವೆಚ್ಚ ಮಾಡುವ ರಾಜ್ಯದ ರೈತರಿಗೆ ಇದರಿಂದ ತೊಂದರೆಯಾಗುತ್ತದೆ. ಯಾಕೆಂದರೆ, ಸರ್ಕಾರ ಘೋಷಿಸಿದ ಬೆಲೆಗಿಂತ ಇವರ ಉತ್ಪಾದನೆ ವೆಚ್ಚ ತುಂಬಾ ಹೆಚ್ಚಾಗಿರುತ್ತದೆ. ಆದರೆ, ತಮ್ಮ ಬೆಳೆಗೆ ಕಡಿಮೆ ವೆಚ್ಚ ಮಾಡಿದ ರಾಜ್ಯಗಳ ರೈತರಿಗೆ ಸರ್ಕಾರದಿಂದ ಹೆಚ್ಚು ಬೆಲೆ ಪಡೆಯುತ್ತಾರೆ. ಹೀಗಾಗಿ, ಸಮಾನ ಬೆಂಬಲ ಬೆಲೆ ಇಲ್ಲಿ ಸರ್ಕಾರದ ಉದ್ದೇಶವನ್ನು ಪೂರೈಸುವುದಿಲ್ಲ.