ಲಖನೌ: ದೆಹಲಿಯಿಂದ ಹಥ್ರಾಸ್ಗೆ ತೆರಳುತ್ತಿದ್ದ ನಾಲ್ವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಪಿಎಫ್‌ಐ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರನ್ನು ಮುಜಫರ್ ನಗರದ ಅತೀಕ್-ಉರ್ ರೆಹಮಾನ್, ಮಲಪ್ಪುರಂನ ಸಿದ್ದೀಕ್, ಬಹ್ರೇಚ್‌ನ ಮಸೂದ್ ಅಹ್ಮದ್ ಮತ್ತು ರಾಂಪುರದ ಆಲಂ ಎಂದು ಗುರುತಿಸಲಾಗಿದೆ.
ಉತ್ತರಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಭಂಗ ತರುವಂತಹ ಅವರ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಕೆಲವು ಸಾಹಿತ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಲಯಾಳಂ ಸುದ್ದಿ ಪೋರ್ಟಲ್‌ಗಳಿಗಾಗಿ ಕೆಲಸ ಮಾಡುತ್ತಿರುವ ದೆಹಲಿ ಮೂಲದ ಪತ್ರಕರ್ತನೊಬ್ಬ ಈ ಬಂಧಿತ ನಾಲ್ಕು ಜನರಲ್ಲಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವರ ಮೇಲೆ ಸೆಕ್ಷನ್ 151ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉತ್ತರಪ್ರದೇಶದ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಾಲ್ವರು ಆರೋಪಿಗಳಿಗೆ ಪಿಎಫ್‌ಐ ಮತ್ತು ಅದರ ಸಹಾಯಕ ಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ)ನೊಂದಿಗೆ ಸಂಬಂಧವಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಸಂಘಟನೆಯ ಪಾಲ್ಗೊಳ್ಳುವಿಕೆಗಾಗಿ ಯುಪಿ ಪೊಲೀಸರು ಈ ಹಿಂದೆ ಪಿಎಫ್‌ಐ ನಿಷೇಧವನ್ನು ಕೋರಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ಸಿಎಂ ಯೋಗಿ ಹೇಳಿಕೆ:
ನಮ್ಮ ಸರ್ಕಾರವನ್ನು ಉರುಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪಿತೂರಿ ಮಾಡಲಾಗುತ್ತಿದೆ. ರಾಜ್ಯದ ಹಥ್ರಾಸ್ನಲ್ಲಿ 19 ವರ್ಷದ ದಲಿತ ಮಹಿಳೆಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರದ ವಿಷಯವನ್ನು ಇಟ್ಟುಕೊಂಡು, ಜಾತಿ ಮತ್ತು ಕೋಮು ಗಲಭೆಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ನಾಲ್ವರ ಬಂಧನ ಖಂಡಿಸಿದ ಪಿಎಫ್‌ಐ:
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಬಂಧನವನ್ನು ಖಂಡಿಸಿದೆ. ಇದು ಶೋಚನೀಯ ಮತ್ತು ಕಾನೂನುಬಾಹಿರ ಎಂದು ಹೇಳಿದೆ. ಉತ್ತರಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆ ವಿಫಲವಾಗಿದೆ. ಹಥ್ರಾಸ್ ಪ್ರಕರಣದಿಂದ ಎಲ್ಲರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಪಿಎಫ್‌ಐ ಅನ್ನು ಸರ್ಕಾರ ಎಳೆದು ತಂದಿದೆ. ಆದರೆ, ಪಾಪ್ಯುಲರ್ ಫ್ರಂಟ್ ಯುಪಿ ಸರ್ಕಾರದ ಬೆದರಿಕೆಗೆ ಬಗ್ಗುವುದಿಲ್ಲ. ಸರ್ಕಾರ ಸಿಎಫ್‌ಐ ನಾಯಕರು ಮತ್ತು ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ” ಎಂದು ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ ಹೇಳಿದರು.
ಪಿಎಫ್‌ಐ ಎಂದರೇನು:
ದಕ್ಷಿಣ ಭಾರತದಲ್ಲಿ ನೆಲೆಗೊಂಡಿರುವ ಹಲವಾರು ಮುಸ್ಲಿಂ ಸಂಘಟನೆಗಳು ಮುಖ್ಯವಾಗಿ ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ (ಕೆಎಫ್‌ಡಿ), ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ (ಎನ್‌ಡಿಎಫ್) ಮತ್ತು ಮಣಿತಾ ನೀತಿ ಪಸರಾಯ್ (ಎಂಎನ್‌ಪಿ) ಒಗ್ಗೂಡಿ ಪಿಡಿಐಯನ್ನು 2006ರಲ್ಲಿ ರಚಿಸಿದವು. ಮುಸ್ಲಿಂ ಸಮುದಾಯ, ವಿಶೇಷವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕುರಿತು ಹೋರಾಡಲು ಇದನ್ನು ಸ್ಥಾಪಿಸಲಾಗಿತ್ತು. ಆ ಬಳಿಕ 2006ರ ನವೆಂಬರ್ನಲ್ಲಿ ಕೇರಳದಲ್ಲಿ ಪಿಎಫ್‌ಐ ಅನ್ನು ಇತರ ಮೂರು ಮುಸ್ಲಿಂ ಸಂಘಟನೆಗಳನ್ನ ಸೇರಿಸಿಕೊಂಡು ಸ್ಥಾಪನೆ ಮಾಡಲಾಯಿತು.