ಕರ್ನಾಟಕ

karnataka

ETV Bharat / bharat

ವಿಶ್ಲೇಷಣೆ: ಲೋಕಸಭೆಯ ಗಾತ್ರ ಹಿಗ್ಗುವ ಅಗತ್ಯ ಇದೆಯೇ ? - ಲೋಕಸಭೆಯ ಪ್ರಸ್ತುತ ಬಲ

543 -ಇದು ಲೋಕಸಭೆಯ ಪ್ರಸ್ತುತ ಬಲ. 1971 ರ ಜನಗಣತಿ ಆಧಾರದ ಮೇಲೆ 1977ರಲ್ಲಿ ರಾಜ್ಯಗಳ ನಡುವೆ ಸೀಟು ಹಂಚಿಕೆ ಮಾಡುವಾಗ ಈ ಸಂಖ್ಯೆಯನ್ನು ನಿರ್ಧರಿಸಲಾಯಿತು. 1971ರಲ್ಲಿ 55 ಕೋಟಿಯಷ್ಟು ಇದ್ದ ಭಾರತದ ಜನಸಂಖ್ಯೆ ಈಗ 130 ಕೋಟಿಗೆ ಏರಿಕೆ ಆಗಿದೆ. ಅಂದಿನಿಂದ ಇಂದಿನ ತನಕ ಪ್ರತಿ ಸಂಸದೀಯ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಬೆಳೆವಣಿಗೆ ಹೊಂದುತ್ತಿದ್ದು, ಅವರ ಅಗತ್ಯಗಳನ್ನು ಪೂರೈಸಲು ಚುನಾಯಿತ ಪ್ರತಿನಿಧಿಗಳಿಗೆ ಸಾಧ್ಯ ಆಗುತ್ತಿಲ್ಲ.

Lok Sabha
ಲೋಕಸಭೆ

By

Published : Feb 7, 2020, 7:18 PM IST

543 -ಇದು ಲೋಕಸಭೆಯ ಪ್ರಸ್ತುತ ಬಲ. 1971 ರ ಜನಗಣತಿ ಆಧಾರದ ಮೇಲೆ 1977ರಲ್ಲಿ ರಾಜ್ಯಗಳ ನಡುವೆ ಸೀಟು ಹಂಚಿಕೆ ಮಾಡುವಾಗ ಈ ಸಂಖ್ಯೆಯನ್ನು ನಿರ್ಧರಿಸಲಾಯಿತು. 1971ರಲ್ಲಿ 55 ಕೋಟಿಯಷ್ಟು ಇದ್ದ ಭಾರತದ ಜನಸಂಖ್ಯೆ ಈಗ 130 ಕೋಟಿಗೆ ಏರಿಕೆ ಆಗಿದೆ. ಅಂದಿನಿಂದ ಇಂದಿನ ತನಕ ಪ್ರತಿ ಸಂಸದೀಯ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಬೆಳೆವಣಿಗೆ ಹೊಂದುತ್ತಿದ್ದು, ಅವರ ಅಗತ್ಯಗಳನ್ನು ಪೂರೈಸಲು ಚುನಾಯಿತ ಪ್ರತಿನಿಧಿಗಳಿಗೆ ಸಾಧ್ಯ ಆಗುತ್ತಿಲ್ಲ.

ಭಾರತಕ್ಕಿಂತ ಕಡಿಮೆ ಜನಸಂಖ್ಯೆ ಇರುವ ರಾಷ್ಟ್ರಗಳಲ್ಲಿ ಕೂಡ, ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇದೆ. ಬ್ರಿಟನ್ನಿನ ಕೆಳಮನೆ ಹೌಸ್ ಆಫ್ ಕಾಮನ್ಸ್ ನಲ್ಲಿ 650 ಸಂಸತ್ ಸದಸ್ಯರು ಇದ್ದರೆ, ಕೆನಡಾದಲ್ಲಿ 443 ರಷ್ಟು ಸದಸ್ಯರನ್ನು ಕಾಣಬಹುದು. ಅಮೆರಿಕ ಸಂಸತ್ತಿನಲ್ಲಿ 535 ಸದಸ್ಯರು ಇದ್ದಾರೆ. ಭಾರತಕ್ಕೆ ಹೋಲಿಸಿದರೆ, ಈ ದೇಶಗಳಲ್ಲಿ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಮತ್ತು ಜನಸಂಖ್ಯೆಯ ಅನುಪಾತ ಉತ್ತಮ ರೀತಿಯಲ್ಲಿ ಇದೆ.

ಲೋಕಸಭಾ ಸದಸ್ಯರ ಪ್ರಾಥಮಿಕ ಕೆಲಸ ಎಂದರೆ ಶಾಸನ ರಚನೆ. ಕೇಂದ್ರ ಮತ್ತು ಸಮವರ್ತಿ ಪಟ್ಟಿಯಲ್ಲಿ ಸೂಚಿಸಲಾದ ವಿಷಯಗಳ ಕುರಿತಂತೆ ಸದನ ಮಸೂದೆಗಳನ್ನು ಮಂಡಿಸಬಹುದು. ಆದರೆ ನಮ್ಮ ಸಂಸದೀಯ ವ್ಯವಸ್ಥೆಯ ಕಾರ್ಯ ಚಟುವಟಿಕೆ ಈ ಸಿದ್ಧಾಂತಕ್ಕಿಂತಲೂ ಬಹಳಷ್ಟು ಭಿನ್ನವಾಗಿ ಇದೆ. ಕಾರ್ಯಕ್ರಮಗಳು ಮತ್ತು ಯೋಜನೆಗಳ ಸಮಗ್ರ ಮೇಲ್ವಿಚಾರಣೆ ನಡೆಸಲು ಮತ್ತು ನಿಗಾ ಇಡಲು ಸಂಸದರು ಕೇಂದ್ರ ಕಾರ್ಯಾಂಗದ ಜೊತೆ ಇವರು ನಿಕಟವಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಜನಸಂಖ್ಯೆಯ ಅನುಪಾತಕ್ಕೆ ತಕ್ಕಂತೆ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಮುಖ್ಯ ಆಗುತ್ತದೆ. ಕೆಲವು ಕ್ಷೇತ್ರಗಳು ಜನಸಂಖ್ಯೆಯಲ್ಲಿ ಹೆಚ್ಚಳ ದಾಖಲಿಸಿದ್ದರೆ ಮತ್ತೆ ಕೆಲವು ಕ್ಷೇತ್ರಗಳಲ್ಲಿ ಬದಲಾವಣೆ ಆಗಿಲ್ಲ. ಪರಿಣಾಮ ದೇಶದ ಜನಸಂಖ್ಯೆಗೆ ಹೋಲಿಸಿದರೆ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಸಂಕುಚಿತಗೊಂಡಿದೆ. ರಾಜ್ಯಸಭೆ ರೂಪುಗೊಂಡಾಗಿನಿಂದಲೂ ಅದರ ಸದಸ್ಯರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೇಶದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೂಡ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 1,000 ಕ್ಕೆ ಹೆಚ್ಚಿಸಲು ಸೂಚಿಸಿದ್ದರು. ಭಾರತೀಯ ಸಂಸದೀಯ ವ್ಯವಸ್ಥೆಯನ್ನು ಹೆಚ್ಚು ಪ್ರಜಾಪ್ರಭುತ್ವ ಮತ್ತು ಪ್ರಜಾ ಸ್ನೇಹಿಯಾಗಿ ಮಾಡಲು, ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸುವುದು ಅತ್ಯಗತ್ಯ. ಆದರೆ ಈ ಬದಲಾವಣೆ ಮಾಡುವ ಮೊದಲು ಗಮನಿಸಬೇಕಾದ ಅಂಶಗಳು ಕೆಲವು ಇವೆ.

ಭಾರತದಲ್ಲಿ ಸಂಸದೀಯ ಚರ್ಚೆಗಳ ಗುಣಮಟ್ಟ ಎಲ್ಲರಿಗೂ ತಿಳಿದೇ ಇದೆ. ಕೆಲವು ಸಂಸದರ ಸರಾಸರಿ ಹಾಜರಾತಿ ಶೇಕಡಾ ಸೊನ್ನೆಯಷ್ಟು ಇರುತ್ತದೆ. ಕೋರಂ ಕೊರತೆಯಿಂದಾಗಿ ಸದನದ ಸಭೆ ಸ್ಥಗಿತಗೊಂಡ ಉದಾಹರಣೆಗಳೂ ಇವೆ. ಅಧಿವೇಶನಗಳಲ್ಲಿ ಬೆರಳೆಣಿಕೆಯಷ್ಟು ಸಂಸದರು ಮಾತ್ರ ಸಕ್ರಿಯವಾಗಿ ಭಾಗವಹಿಸುತ್ತಾರೆ. ಸೀಮಿತ ಅವಧಿಯಿಂದಾಗಿ ಹೆಚ್ಚಿನ ಸದಸ್ಯರಿಗೆ ಮಾತನಾಡಲು ಅವಕಾಶ ಸಿಗುವುದಿಲ್ಲ. ತಮ್ಮ ಸದಸ್ಯರ ವಾಕ್ ಸ್ವಾತಂತ್ರ್ಯವನ್ನು ಸ್ವತಃ ರಾಜಕೀಯ ಪಕ್ಷಗಳೇ ತಡೆ ಹಿಡಿಯುತ್ತವೆ. ಬಹುಮುಖಿ ಸಂವಾದಗಳಿಗೆ ಅವಕಾಶ ಇಲ್ಲ. ಚುನಾಯಿತ ಪ್ರತಿನಿಧಿಗಳ ಆಶಯಗಳು ಸಂಪೂರ್ಣ ಭಿನ್ನ ಆಗಿವೆ. ಅವರು ಚರ್ಚೆಗಳಲ್ಲಿ ಭಾಗವಹಿಸುವ ಬದಲು ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡುವತ್ತ ಗಮನ ಹರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಂಸತ್ ಸ್ಥಾನಗಳ ಸಂಖ್ಯೆ ಹೆಚ್ಚಳ ಮಾಡುವುದರಿಂದ ಯಾವುದೇ ವ್ಯತ್ಯಾಸ ಆಗದು ಎಂದು ಸಮಾಜದ ಒಂದು ವರ್ಗ ಅಭಿಪ್ರಾಯಪಡುತ್ತದೆ. ಸಂಸತ್ತಿನ ಚಟುವಟಿಕೆ ಮುಖ್ಯವಾಗಿ ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ಅಧಿವೇಶನ ಸಂಘಟಿಸುವ ಸರ್ಕಾರದ ಹೊಣೆಗಾರಿಕೆಯನ್ನು ಅವಲಂಬಿಸಿರುತ್ತದೆ. ಅಧಿವೇಶನಗಳನ್ನು ಅಡ್ಡಿಪಡಿಸಲು ವಿರೋಧ ಪಕ್ಷಗಳು ಯಾವಾಗಲೂ ಉತ್ಸಾಹ ತೋರುತ್ತವೆ. ಇಂತಹ ಹೊತ್ತಿನಲ್ಲಿ ಸಂಖ್ಯೆಯನ್ನು 1,000 ಕ್ಕೆ ಹೆಚ್ಚಿಸುವುದರಿಂದ ಅಸಮಾಧಾನ ಮತ್ತಷ್ಟು ಹೆಚ್ಚುತ್ತದೆ.

ಸುಮಾರು 500 ರಷ್ಟು ಲೋಕಸಭಾ ಸದಸ್ಯರಲ್ಲಿ ಕೆಲವೇ ಕೆಲವರು ಅಧಿವೇಶನಗಳ ವೇಳೆ ಮತ್ತೊಬ್ಬರ ವಾದಗಳನ್ನು ಆಲಿಸುತ್ತಾರೆ. ಸಭಾತ್ಯಾಗ, ಸದನದ ಬಾವಿಯಲ್ಲಿ ಪ್ರತಿಭಟನೆ ಮಾಡುವುದು ಹಾಗೂ ಅಧಿವೇಶನಕ್ಕೆ ಅಡ್ಡಿಪಡಿಸುವುದು ರೂಢಿಯಾಗಿ ಬಿಟ್ಟಿದೆ. ಈ ಕಾರಣಗಳಿಂದ ಸದಸ್ಯರ ಸಂಖ್ಯೆ ಹೆಚ್ಚಿಸುವ ಬಗ್ಗೆ ಟೀಕೆಗಳು ವ್ಯಕ್ತ ಆಗುತ್ತಿವೆ. ಆದರೆ ಸಂಖ್ಯೆ ಹಿಗ್ಗಬೇಕು ಎಂಬುದರ ಪರವಾಗಿ ಇರುವ ಗುಂಪುಗಳು ತಮ್ಮದೇ ಆದ ಕಾರಣಗಳನ್ನು ನೀಡುತ್ತವೆ. ಸಂಸದರು ತಮ್ಮ ಅವಧಿಯ ಬಹುಪಾಲನ್ನು ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ಭಾಗಿ ಆಗುವುದರಲ್ಲಿಯೇ ಕಳೆಯುತ್ತಾರೆ. ಅವರು ಅಧಿಕೃತ ಆಡಳಿತ ಯಂತ್ರ ಸಂಪರ್ಕಿಸಿ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಆಯಾ ಅಧಿಕಾರಿಗಳ ಜೊತೆ ಪರಾಮರ್ಶನಾ ಸಭೆಗಳನ್ನು ನಡೆಸುತ್ತಾರೆ. ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು, ಪ್ರತಿ ಚುನಾಯಿತ ಪ್ರತಿನಿಧಿಗೆ ಕಡಿಮೆ ಜನಸಂಖ್ಯೆ ಇರುವಂತೆ ನೋಡಿಕೊಳ್ಳಬೇಕು. ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಮತ್ತು ಸುಧಾರಣೆಗಳನ್ನು ಜಾರಿಗೆ ತಂದು 1,000 ಅಥವಾ ಅದಕ್ಕೂ ಹೆಚ್ಚಿನ ಸದಸ್ಯರಿಗೆ ಸುಲಭವಾಗಿ ಅವಕಾಶ ಕಲ್ಪಿಸಬಹುದು. ಸಂಸದೀಯ ಸಮಿತಿಗಳ ಸ್ಥಾಪನೆಯು ಭಾರತೀಯ ಸಂಸದೀಯ ವ್ಯವಸ್ಥೆಯಲ್ಲಿ ಅಂತಹ ಒಂದು ಪ್ರಮುಖ ತಿರುವು. ಈ ಸಮಿತಿಗಳು ಸ್ವತಃ ಪುಟಾಣಿ ಸಂಸತ್ತುಗಳಾಗಿದ್ದು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರನ್ನು ಅವು ಒಳಗೊಂಡಿವೆ. ಎಣಿಕೆಗೆ ಅನುಗುಣವಾಗಿ, ಈ ಸಮಿತಿಗಳಲ್ಲಿ ಪ್ರತಿಯೊಂದು ಪಕ್ಷ ಕೂಡ ಪ್ರಾತಿನಿಧ್ಯ ಪಡೆದಿರುತ್ತದೆ. ಸಮಿತಿಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇದ್ದು, ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯುತ್ತಾರೆ. ಅಲ್ಲದೆ ಸಮಿತಿಯ ಸದಸ್ಯರು ಸಾರ್ವಜನಿಕರ ದೃಷ್ಟಿಗೂ ಬೀಳದೇ ಇರುವುದು ಅವರನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ.

ಎರಡೂ ಸದನಗಳಲ್ಲಿ ಪ್ರತಿನಿಧಿಗಳ ಸಂಖ್ಯೆ ಹೆಚ್ಚು ಮಾಡುವಾಗ ಚುನಾವಣಾ ಸ್ವರೂಪವನ್ನು ಕೂಡ ಮಾರ್ಪಾಟು ಮಾಡಬಹುದು. ಪ್ರಸ್ತುತ ಚುನಾವಣಾ ಪ್ರಕ್ರಿಯೆಯಲ್ಲಿ, ಶೇಕಡಾವಾರು ಮತಗಳಿಗೂ ಮತ್ತು ಗೆದ್ದ ಸ್ಥಾನಗಳ ಸಂಖ್ಯೆಗೂ ಯಾವುದೇ ಸಂಬಂಧ ಇಲ್ಲ. ಆದ್ದರಿಂದ ಪ್ರಮಾಣಕ್ಕೆ ಅನುಗುಣವಾದ ಪ್ರಾತಿನಿಧ್ಯ ವ್ಯವಸ್ಥೆಗೆ ಬೇಡಿಕೆ ಇದೆ. ಈ ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಲೋಪಗಳು ಇವೆ. ಗಾತ್ರ ಹೆಚ್ಚಳ ಮಾಡುವಾಗ ಈ ಎರಡೂ ವೈಪರೀತ್ಯಗಳನ್ನು ಸರಿದೂಗಿಸುವ ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳಬೇಕು. ಪ್ರಸ್ತುತ ವಿಧಾನದ ಪ್ರಕಾರ 500 ಸ್ಥಾನಗಳಿಗೆ ಚುನಾವಣೆ ನಡೆಸಬಹುದು ಮತ್ತು ಉಳಿದ 500 ಸ್ಥಾನಗಳನ್ನು ಪ್ರಮಾಣಕ್ಕನುಸಾರ ಪ್ರಾತಿನಿಧ್ಯ ವ್ಯವಸ್ಥೆ ಬಳಸಿ ಭರ್ತಿ ಮಾಡಬಹುದು. ಈ ರೀತಿ, ಪ್ರಜಾಪ್ರಭುತ್ವ ಕಾಪಾಡಲು ಸಾಧ್ಯ ಇದೆ.

ಮತಗಳು ಮತ್ತು ಸ್ಥಾನಗಳಲ್ಲಿನ ಅಸಮಾನತೆಯ ಹೊರತಾಗಿ, ಭಾರತದ ವಿವಿಧ ಭಾಗಗಳಲ್ಲಿ ಕ್ಷೇತ್ರ ವಿಂಗಡಣೆಯಲ್ಲಿ ಸಮಸ್ಯೆ ಇದೆ. ಇದರ ಪರಿಣಾಮವಾಗಿ ವಿವಿಧ ರಾಜಕೀಯ ಸಮೀಕರಣಗಳು ಕಂಡು ಬರುತ್ತವೆ. ಉದಾಹರಣೆಗೆ, ದಕ್ಷಿಣ ಭಾರತದಲ್ಲಿ ಕೇವಲ 130 ಲೋಕಸಭಾ ಸ್ಥಾನಗಳು ಇವೆ. ತತ್ಪಲವಾಗಿ, ಭಾರತೀಯ ರಾಜಕಾರಣದಲ್ಲಿ ಉತ್ತರ ಭಾರತದ ಪ್ರಾಬಲ್ಯ ಸ್ಪಷ್ಟವಾಗಿ ಕಂಡುಬರುತ್ತದೆ. ಪ್ರಸ್ತುತ ಲೋಕಸಭಾ ಸ್ಥಾನಗಳನ್ನು 1971 ರ ಜನಗಣತಿ ಆಧಾರದ ಮೇಲೆ ನಿರ್ಧಾರ ಮಾಡಲಾಗಿದೆ. ಹಣಕಾಸು ಆಯೋಗಗಳು ಸಹ ಅದೇ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿವೆ. 14 ನೇ ಹಣಕಾಸು ಆಯೋಗ ಮೊದಲ ಬಾರಿಗೆ 2011 ರ ಜನಗಣತಿಗೆ ಒತ್ತು ನೀಡಿದೆ. ಹಣಕಾಸು ಆಯೋಗ ಎಂಬುದು ಸಂವಿಧಾನಬದ್ಧ ಸಂಸ್ಥೆ ಅಗಿದ್ದು ಅದು ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳ ನಡುವಿನ ಆರ್ಥಿಕ ಸಂಬಂಧಗಳನ್ನು ವ್ಯಾಖ್ಯಾನ ಮಾಡುತ್ತದೆ. 1971 ರ ನಂತರ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿದವು. ಹಣ ಹಂಚಿಕೆ ಮಾಡುವಾಗ ಜನಸಂಖ್ಯೆ ಒಂದು ಪ್ರಮುಖ ಮಾನದಂಡ ಆಗಿರುವ ಕಾರಣಕ್ಕೆ ರಾಜ್ಯಗಳಿಗೆ ಆಗುವ ಯಾವುದೇ ಅನ್ಯಾಯ ತಪ್ಪಿಸುವ ಉದ್ದೇಶದಿಂದ ಹಣಕಾಸು ಆಯೋಗ 1971 ರ ಜನಗಣತಿಯನ್ನು ಆಧರಿಸಿದೆ. ಆದರೆ 15 ನೇ ಆಯೋಗ 2011 ರ ಜನಗಣತಿಯನ್ನು ಪರಿಗಣಿಸಿದ್ದರಿಂದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಇತರೆ ದಕ್ಷಿಣ ರಾಜ್ಯಗಳ ಮೇಲೆ ಪರಿಣಾಮ ಬೀರಿತು.

ಮುಂದೊಂದು ದಿನ ಲೋಕಸಭೆ ಗಾತ್ರ ಹಿಗ್ಗಿಸಲು ಹಸಿರು ನಿಶಾನೆ ದೊರೆತರೆ, 2011 ರ ಜನಗಣತಿಯನ್ನೇ ಆಧಾರವಾಗಿ ಪರಿಗಣಿಸುವ ಅಪಾಯ ಇದೆ. ಹಾಗೊಂದು ವೇಳೆ ಅದು ಕಾರ್ಯರೂಪಕ್ಕೆ ಬಂದರೆ ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆ ಆಗಲಿದೆ. ಇದನ್ನು ತಡೆಗಟ್ಟಲು, ಅಸ್ತಿತ್ವದಲ್ಲಿರುವ ರಾಜ್ಯಗಳನ್ನು ವಿಭಜನೆ ಮಾಡಿ ಮರುಸಂಘಟನೆಗೆ ಒಳಪಡಿಸಬೇಕು. ಇದು ತೀವ್ರ ರಾಜಕೀಯ ಹಿನ್ನಡೆಗೆ ಕಾರಣ ಆಗಬಹುದು. ಈ ಸವಾಲನ್ನು ಎದುರಿಸಲು ಇರುವ ಏಕೈಕ ಮಾರ್ಗ ಎಂದರೆ ಉತ್ತರದ ರಾಜ್ಯಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿಸುವುದು, ಆ ಮೂಲಕ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದು ಆಗಿದೆ. ಆದರೆ ಉತ್ತರದ ರಾಜ್ಯಗಳ ಸ್ಥಾನ ಹೆಚ್ಚಿಸಲೆಂದೇ ಲೋಕಸಭೆಯ ಗಾತ್ರ ಹಿಗ್ಗಿಸುವುದರ ಉದ್ದೇಶ ಇರಬಹುದು ಎಂಬ ಆತಂಕ ವ್ಯಾಪಕವಾಗಿದೆ. 2011 ರ ಜನಗಣತಿ ಆಧರಿಸಿ ಗಾತ್ರ ಹೆಚ್ಚಳ ಮಾಡಿದರೆ, ದಕ್ಷಿಣ ರಾಜ್ಯಗಳ ಪ್ರತಿನಿಧಿಗಳ ಸಂಖ್ಯೆ ಕಡಿಮೆ ಆಗದು ಆದರೆ ರಾಜಕೀಯ ಪ್ರಾತಿನಿಧ್ಯದ ಒಟ್ಟಾರೆ ಶೇಕಡಾವಾರು ಪ್ರಮಾಣ ಖಂಡಿತವಾಗಿಯೂ ಕಡಿಮೆ ಆಗಲಿದೆ. ಲೋಕಸಭೆಯ ಗಾತ್ರ ಹೆಚ್ಚಿಸುವ ಬಗ್ಗೆ ವ್ಯತಿರಿಕ್ತ ಅಭಿಪ್ರಾಯಗಳು ಇವೆ. ಅನುಕೂಲಕರ ಮತ್ತು ಅಹಿತಕರ ಅಂಶಗಳೆರಡನ್ನೂ ಎಚ್ಚರಿಕೆಯಿಂದ ಗಣನೆಗೆ ತೆಗೆದುಕೊಳ್ಳಬೇಕು. ಲೋಕಸಭೆಯ ಬಲ ಹೆಚ್ಚಿಸಲು ಇರುವ ನಿಜವಾದ ಕಾರಣಗಳನ್ನು ಸ್ಪಷ್ಟಪಡಿಸಬೇಕು. ಯಾವುದೇ ನಿರ್ಧಾರದೊಂದಿಗೆ ಮುಂದುವರಿಯುವ ಮೊದಲು, ದೇಶದ ವಿವಿಧ ವರ್ಗಗಳ ಧ್ವನಿಯನ್ನು ಆಲಿಸುವುದು ಮುಖ್ಯ.

ABOUT THE AUTHOR

...view details