ನವದೆಹಲಿ:ಇರಾನ್ ವಿರುದ್ಧ ಅಮೆರಿಕ ವಿಧಿಸಿದ ಆರ್ಥಿಕ ದಿಗ್ಬಂಧನ ಪಾಲಿಸಲು ಭಾರತ ಮುಂದಾಗಿದೆ. ಆ ರಾಷ್ಟ್ರದಿಂದ ಕಚ್ಚಾ ತೈಲ ಆಮದು ಸ್ಥಗಿತಗೊಳಿಸಿದ ಬೆನ್ನಲ್ಲೇ ಇರಾನ್ ಪಾಕ್ ಮತ್ತು ಚೀನಾದತ್ತ ಮುಖ ಮಾಡಿದೆ.
ಇರಾನ್ ಆಗ್ನೇಯ ಕರಾವಳಿಯಲ್ಲಿ ಭಾರತ ಅಭಿವೃದ್ಧಿಪಡಿಸುತ್ತಿರುವ ಚಬಹರ್ ಬಂದರಿಗೆ ಪಾಕ್ನ ಗ್ವಾದರ್ ಬಂದರಿನ ಜತೆ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಿಕೊಂಡಿದ್ದು ಭಾರತಕ್ಕೆ ಆತಂಕ ಉಂಟು ಮಾಡಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಇರುವ ಚಬಹರ್- ಗ್ವಾದರ್ ಬಂದರುಗಳ ನಡುವೆ ಸಂಪರ್ಕ ಏರ್ಪಟ್ಟರೆ ಪಾಕ್ ಮತ್ತು ಚೀನಾ ನಡುವಣ ವಾಣಿಜ್ಯ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ. ಚಬಹರ್ ಬಂದರನ್ನು ಚೀನಾದ ಬಹು ಉದ್ದೇಶಿಕ ಆರ್ಥಿಕ ಕಾರಿಡಾರ್ ಯೋಜನೆಯಾದ ಬೆಲ್ಟ್ ಅಂಡ್ ರೋಡ್ಗೆ ಜೋಡಿಸುವ ಸಾಧ್ಯತೆ ದಟ್ಟವಾಗಿದೆ. ಈ ನಡೆ ಭಾರತದ ಆತಂಕವನ್ನು ಹೆಚ್ಚಿಸಿದೆ.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಇರಾನ್ ಪಾಕಿಸ್ತಾನದ ಮುಂದೆ ಈ ನೂತನ ಪ್ರಸ್ತಾಪ ಇರಿಸಿದೆ. ಇರಾನ್ ವಿದೇಶಾಂಗ ಸಚಿವ ಜಾವದ್ ಝರೀಫ್ ಅವರು ಈಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಈ ಪ್ರಸ್ತಾವ ಮಂಡಿಸಿದ್ದಾರೆ. ಪಾಕ್ನ ನೈಋತ್ಯ ಕರಾವಳಿ ತೀರದಲ್ಲಿ ಗ್ವಾದರ್ ಬಂದರನ್ನು ಚೀನಾ ಅಭಿವೃದ್ಧಿಪಡಿಸುತ್ತಿದೆ.