ನವದೆಹಲಿ: ಇಂದು ದೆಹಲಿಯಲ್ಲಿ ಪ್ರಾರಂಭವಾದ ಜಾಗತಿಕ ವಿವಾದಗಳ ಕುರಿತ ರೈಸಿನಾ ಸಂವಾದದ ಐದನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಇರಾನ್ ವಿದೇಶಾಂಗ ಸಚಿವ ಜವಾದ್ ಜರೀಫ್, ಮೂರು ದಿನಗಳ ಭೇಟಿಗೆ ಭಾರತಕ್ಕೆ ಆಗಮಿಸಿದ್ದಾರೆ.
ರೈಸಿನಾ ಸಂವಾದ 2020 ರ ಹೊರತಾಗಿ ಜರೀಫ್ ಅವರು ನಾಲೇ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನೂ ಕೂಡ ಭೇಟಿ ಮಾಡಲಿದ್ದಾರೆ.
ಇರಾನ್ನ ಹಿರಿಯ ಸೇನಾ ಕಮಾಂಡರ್ ಹತ್ಯೆ ಬಳಿಕ ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಜಗತ್ತಿನ ಗಮನ ಇದರ ಮೇಲಿರುವ ವೇಳೆಯಲ್ಲಿ ಇರಾನ್ ವಿದೇಶಾಂಗ ಸಚಿವರ ಭಾರತ ಭೇಟಿ ಮಹತ್ತರದ್ದಾಗಿದೆ. ಇನ್ನು ಇರಾನ್ನಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಲ್ಲಿ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆ ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಈ ಹಿಂದೆ ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿತ್ತು.
ಬಾಗ್ದಾದ್ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇರಾನ್ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ, ಬಾಗ್ದಾದ್ ಏರ್ಪೋರ್ಟ್ನಲ್ಲಿ ವೈಮಾನಿಕ ದಾಳಿ ನಡೆಸಿ ಇರಾಕ್ ಹಾಗೂ ಇರಾನ್ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಮೇಜರ್ ಜನರಲ್ ಕಾಸಿಮ್ ಸುಲೇಮಾನಿಯನ್ನು ಕೊಂದಿತ್ತು. ಆ ಬಳಿಕ ಎರಡೂ ದೇಶಗಳ ನಡುವೆ ಯುದ್ಧ ಭೀತಿ ಏರ್ಪಟ್ಟಿದೆ. ಇತ್ತ ಅಮೆರಿಕ ಬೆಂಬಲಕಕ್ಕೆ ನಿಂತಿರುವ ಇಸ್ರೇಲ್ ದೇಶದ ಮೇಲೆ ದಾಳಿ ನಡೆಸುವುದಾಗಿಯೂ ಇರಾನ್ ಎಚ್ಚರಿಕೆ ನೀಡಿದ್ದು, ಇರಾನ್ನಿಂದ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ದೆಹಲಿಯಲ್ಲಿರುವ ಅಮೆರಿಕ ಹಾಗೂ ಇಸ್ರೇಲ್ ರಾಯಭಾರಿ ಕಚೇರಿಗಳಿಗೆ ಭದ್ರತೆ ಒದಗಿಸಲಾಗಿತ್ತು.