ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದ ಲೇವಾದೇವಿ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ವಿರುದ್ಧ ಸುತ್ತೋಲೆಗಳನ್ನು ಹೊರಡಿಸಿವೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಶಶಿ ತರೂರ್ ಸೇರಿದಂತೆ ಹಲವರು ಬುಧವಾರ ಪಿ ಚಿದಂಬರಂ ಅವರ ಬೆನ್ನಿಗೆ ನಿಂತಿದ್ದಾರೆ.
ಐಎನ್ಎಕ್ಸ್ ಮೀಡಿಯಾಕ್ಕೆ ಸಂಬಂಧಿಸಿದ ಹಗರಣದಲ್ಲಿ ಪಿ ಚಿದಂಬರಂ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದ್ದ ಕಾರಣ ಕಾಂಗ್ರೆಸ್ ನಾಯಕರು ಚಿಂದಬರಂ ಅವರನ್ನು ಬೆಂಬಲಿಸಿದ್ದರು. ಮಾಜಿ ಹಣಕಾಸು ಸಚಿವರ 'ಚಾರಿತ್ರ್ಯ ಹರಣ' ಮಾಡಲು ತನಿಖಾ ಏಜೆನ್ಸಿಗಳು ಮತ್ತು ಮಾಧ್ಯಮಗಳನ್ನು ಸರ್ಕಾರ ಬಳಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸತ್ಯವನ್ನು ಹೇಳಿದ್ದಕ್ಕಾಗಿ ಸರ್ಕಾರ ತನ್ನ ನಾಗರಿಕರನ್ನು ಹಿಂಸಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ, ಏನೇ ಇರಲಿ ನಮ್ಮ ಪಕ್ಷ ಅವರೊಂದಿಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ, ಆನಂದ್ ಶರ್ಮಾ ಮತ್ತು ಶಶಿ ತರೂರ್ ಅವರು ಚಿದಂಬರಂ ಕುರಿತು ಒಗ್ಗಟ್ಟಿನಿಂದ ಮಾತನಾಡಿದ್ದಾರೆ.