ನಮಗೆ ಜೀವ ನೀಡಿದ್ದು ಹೆತ್ತ ತಾಯಿಯಾದರೆ, ಜೀವನ ನೀಡುವುದು ಈ ಭೂಮಿತಾಯಿ. ಭೂಮಿ ಹಾಗೂ ಭೂಮಿಯ ವಾತಾವರಣದಿಂದಲೇ ನಾವೆಲ್ಲ ಬದುಕಲು ಸಾಧ್ಯವಾಗಿದ್ದು. ಭೂಮಿ ತಾಯಿಯ ಋಣಕ್ಕೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಪ್ರತಿವರ್ಷ ಏಪ್ರಿಲ್ 22 ರಂದು ವಿಶ್ವ ಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಭೂಮಿಯ ಸಂರಕ್ಷಣೆಯಲ್ಲಿ ಸಮಸ್ತ ಮಾನವಕುಲದ ಜವಾಬ್ದಾರಿ ಮಹತ್ತರವಾಗಿದೆ. ಪರಿಸರ ಹಾಗೂ ಭೂಮಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಇಂದಿನ ಹಾಗೂ ಭವಿಷ್ಯದ ಪೀಳಿಗೆಗಾಗಿ ಆರ್ಥಿಕ, ಸಾಮಾಜಿಕ ಹಾಗೂ ನೈಸರ್ಗಿಕ ಸಮತೋಲನ ಸಾಧಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂಬ ಗೊತ್ತುವಳಿಯನ್ನು 1992ರ ರಿಯೋ ಸಮಾವೇಶದಲ್ಲಿ ಅಂಗೀಕರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರತಿವರ್ಷ ಏಪ್ರಿಲ್ 22 ರಂದು ವಿಶ್ವ ಭೂಮಿ ದಿನ ಆಚರಿಸುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಧರಿಸಿದೆ. ಈ ಬಾರಿ ವಿಶ್ವ ಭೂಮಿ ದಿನದ 50ನೇ ವರ್ಷಾಚರಣೆಯಾಗಿರುವುದು ಮತ್ತೂ ವಿಶೇಷವಾಗಿದೆ. ವಿಶ್ವ ಭೂಮಿ ದಿನಾಚರಣೆ ವಿಶ್ವದ ಅತಿ ದೊಡ್ಡ ಸಾಮಾಜಿಕ ಕಾರ್ಯಕ್ರಮಗಳಲ್ಲೊಂದಾಗಿದೆ. ಭೂಮಿ ದಿನಾಚರಣೆಯ ಕಾರಣದಿಂದಲೇ ಅಮೆರಿಕದಲ್ಲಿ ಶುದ್ಧ ಗಾಳಿ, ಶುದ್ಧ ನೀರು ಮತ್ತು ಅಪಾಯದಲ್ಲಿರುವ ಪ್ರಾಣಿಗಳ ಸಂತತಿಯನ್ನು ಉಳಿಸುವ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. 2016ರಲ್ಲಿ ಪ್ಯಾರಿಸ್ ಹವಾಮಾನ ಒಪ್ಪಂದ ಜಾರಿಗೊಳಿಸಲು ಇದೇ ದಿನದಂದು ಅಂಕಿತ ಹಾಕಲಾಗಿತ್ತು.
ಈ ಬಾರಿಯ ಘೋಷಣೆ "ಹವಾಮಾನ ಸಂರಕ್ಷಣೆ"
ಹವಾಮಾನ ಬದಲಾವಣೆಯಿಂದ ಮಾನವ ಕುಲ ಸೇರಿದಂತೆ ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಅಪಾಯ ಎದುರಾಗಿದೆ. ಹವಾಮಾನ ಬದಲಾವಣೆಯ ವೈಪರೀತ್ಯಗಳನ್ನು ತಡೆಯಲು ವಿಶ್ವದ ಎಲ್ಲ ರಾಷ್ಟ್ರಗಳು ತಕ್ಷಣ ಮುಂದಾಗದಿದ್ದಲ್ಲಿ, ಈಗಿನ ಪೀಳಿಗೆ ಸೇರಿದಂತೆ ಮುಂದಿನ ಪೀಳಿಗೆಗೆ ಖಂಡಿತವಾಗಿಯೂ ಅಪಾಯ ಎದುರಾಗಲಿದೆ.
ವಿಶ್ವ ಭೂಮಿ ದಿನಾಚರಣೆಯ ಇತಿಹಾಸ
ಭೂಮಿಯ ಸಂರಕ್ಷಣೆಗಾಗಿ ಒಗ್ಗಟ್ಟಿನ ಹೋರಾಟ ಮಾಡುವುದು ವಿಶ್ವ ಭೂಮಿ ದಿನಾಚರಣೆಯ ಏಕೈಕ ಗುರಿಯಾಗಿದೆ. ಸಮುದ್ರದಲ್ಲಿ ತೈಲ ಸೋರಿಕೆ, ಹೊಗೆ, ನದಿಗಳ ಮಾಲಿನ್ಯ ಮುಂತಾದುವುಗಳನ್ನು ತಡೆಗಟ್ಟುವುದಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಲು ವಿಶ್ವ ಭೂಮಿ ದಿನಾಚರಣೆ ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಯಲ್ಲಿನ ನಿರ್ಲಕ್ಷ್ಯ ಖಂಡಿಸಿ ಹಾಗೂ ಪರಿಸರ ಸಂರಕ್ಷಣೆಗಾಗಿ ಹೊಸ ಕಾನೂನುಗಳನ್ನು ರೂಪಿಸುವಂತೆ ಆಗ್ರಹಿಸಿ 1970 ರಂದು ಏಪ್ರಿಲ್ 20 ರಂದು ಸುಮಾರು 20 ಮಿಲಿಯನ್ ನಾಗರಿಕರು ಅಮೆರಿಕದಲ್ಲಿ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮದಿಂದ ಭೂಮಿ, ಪರಿಸರ ಸಂರಕ್ಷಣೆಗಾಗಿ ಹಲವಾರು ರಾಷ್ಟ್ರಗಳಲ್ಲಿ ಹೊಸ ಕಾನೂನುಗಳನ್ನು ಜಾರಿಗೊಳಿಸಲಾಯಿತು. ನಂತರ 2009ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಭೂಮಿ ದಿನಾಚರಣೆಯ ಗೊತ್ತುವಳಿ ಅಂಗೀಕರಿಸಲಾಯಿತು.
2019-20 ರಲ್ಲಿ ವಿಶ್ವವನ್ನು ಬಾಧಿಸುತ್ತಿರುವ ಪರಿಸರ ಸಮಸ್ಯೆಗಳು
ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಮುಂದಾಗಬೇಕಿರುವುದು ಇಂದಿನ ಅಗತ್ಯವಾಗಿದೆ. ಈಗಾಗಲೇ ಸಾಕಷ್ಟು ಪರಿಸರ ಹಾಳಾಗಿ ಹೋಗಿದೆ. ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು, ಅತಿ ಹೆಚ್ಚು ಉಷ್ಣತಾಮಾನ ಹಾಗೂ ಕೀನ್ಯಾದಲ್ಲಿನ ಮಿಡತೆಗಳ ಹಾವಳಿ ಇವು ಈ ವರ್ಷದಲ್ಲಿ ಸಂಭವಿಸಿದ ಅತಿ ಗಂಭೀರ ಸ್ವರೂಪದ ಹವಾಮಾನ ಸಮಸ್ಯೆಗಳಾಗಿವೆ. ಇನ್ನು ಇತ್ತೀಚಿನ ಕೋವಿಡ್-19 ಸಂಕಷ್ಟ ಮಾನವ ಮಾತ್ರವಲ್ಲದೆ ಸಮಸ್ತ ಜೀವಸಂಕುಲಕ್ಕೇ ಆತಂಕವೊಡ್ಡಿದೆ. ಅರಣ್ಯ ನಾಶ, ಭೂಮಿ ಬಳಕೆ ಬದಲಾವಣೆ, ವಿಪರೀತ ಕೃಷಿ ಹಾಗೂ ಪಶುಸಂಗೋಪನೆ ಚಟುವಟಿಕೆಗಳು, ವನ್ಯಜೀವಿಗಳ ಕಳ್ಳಸಾಗಣೆ ಮುಂತಾದುವು ಇಂದಿನ ಜ್ವಲಂತ ಹವಾಮಾನ ಸಮಸ್ಯೆಗಳಾಗಿ ಗುರುತಿಸಲ್ಪಟ್ಟಿವೆ.
ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮಾನವರಲ್ಲಿ ಕಾಣಿಸಿಕೊಳ್ಳುವ ಹೊಸ ವೈರಸ್ ಸೋಂಕುಗಳ ಪೈಕಿ ಶೇ.75 ರಷ್ಟು ಪ್ರಾಣಿಗಳಿಂದಲೇ ಹರಡುತ್ತಿವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿರುವುದು ಚಿಂತೆಯ ವಿಷಯವಾಗಿದೆ. ಮಾನವ, ಪ್ರಾಣಿ ಸಂಕುಲ ಹಾಗೂ ಪರಿಸರ ಮೂರೂ ವಿಷಯಗಳು ಯಾವ ರೀತಿಯಲ್ಲಿ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದನ್ನು ಇದರಿಂದ ತಿಳಿಯಬಹುದು. ಪರಿಸರ ಸಂರಕ್ಷಣೆ ಹಾಗೂ ಆರ್ಥಿಕ ಚಟುವಟಿಕೆಗಳು ಸಮತೋಲನದಿಂದಿರುವಂತೆ ನೋಡಿಕೊಳ್ಳುವುದು ಇಂದಿನ ವಿಶ್ವ ಭೂಮಿ ದಿನದಂದು ನಮ್ಮೆಲ್ಲರ ಸಂಕಲ್ಪವಾಗಬೇಕಿದೆ.