ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಕೊಡುಗೆ ಅನನ್ಯ. ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟ ಇವರ ಗ್ರಾಮ ರಾಜ್ಯದ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಅವರು ನೀಡಿದ ಆದ್ಯತೆಯನ್ನು ನಾವು ಅಳವಡಿಸಿಕೊಳ್ಳುವುದು ಅತ್ಯಗತ್ಯ.
ಅಹಿಂಸೆಯ ತತ್ತ್ವ ಪಾಲಿಸಿದ ವಿಶ್ವದ ಮಹಾನ್ ವ್ಯಕ್ತಿಗಳಲ್ಲಿ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ ಪ್ರಮುಖರು. 2004ರ ಜನವರಿಯಲ್ಲಿ ಇರಾನಿಯನ್ ನೊಬೆಲ್ ಪ್ರಶಸ್ತಿ ವಿಜೇತ ಶಿರಿನ್ ಎಬಾಡಿ ಪ್ಯಾರಿಸ್ನಲ್ಲಿ ಅಂತಾರಾಷ್ಟ್ರೀಯ ಅಹಿಂಸಾ ದಿನದ ಪ್ರಸ್ತಾಪವನ್ನು ಕೈಗೆತ್ತಿಕೊಂಡರು. ಮುಂಬೈಯ ವರ್ಲ್ಡ್ ಸೋಶಿಯಲ್ ಫಾರಂನ ಹಿಂದಿ ಶಿಕ್ಷಕರಿಂದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪ್ಯಾರೀಸ್ನಲ್ಲಿ ಪಾಠ ಮಾಡುತ್ತಿದ್ದಾಗ ಈ ಕಲ್ಪನೆ ಬಂದಿತ್ತು. ಕೊನೆಗೆ ಜನವರಿ 2007ರಲ್ಲಿ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲು ಕರೆ ನೀಡಿತು.
ಮಹಾತ್ಮ ಗಾಂಧಿ ವಿಶ್ವದಾದ್ಯಂತ ಪರಿಚಿತರು. ಗಾಂಧಿಯವರ ಕೆಲಸ, ತತ್ವಗಳು ಮತ್ತು ಅವರ ಅಹಿಂಸಾತ್ಮಕ ಪ್ರತಿಭಟನೆಗಳನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಗಾಂಧಿಯವರ ಜನ್ಮದಿನಂದು ಅಂತಾರಾಷ್ಟ್ರೀಯ ಅಹಿಂಸಾತ್ಮಕ ದಿನವನ್ನು ಆಚರಿಸಲು ಯುಎನ್‌ಗೆ ಪ್ರಮುಖ ಕಾರಣವಿದೆ. ಭಾರತದ ಸ್ವಾತಂತ್ರ್ಯದ ಬಗ್ಗೆ ಗಾಂಧಿಯವರ ಬದ್ಧತೆ ಮತ್ತು ಅವರ ಕಾರ್ಯಗಳು ಪ್ರಪಂಚದಾದ್ಯಂತ ನಾಗರಿಕ ಮತ್ತು ಮಾನವ ಹಕ್ಕುಗಳ ಉಪಕ್ರಮಗಳ ಮೂಲಾಧಾರವಾಗಿದೆ.
ಅಹಿಂಸೆಯ ತತ್ತ್ವವನ್ನು ಗಾಂಧೀಜಿಯವರು ಜೈನ ಧರ್ಮದಿಂದ ಅಳವಡಿಸಿಕೊಂಡರು. ಗಾಂಧೀಜಿ ಪ್ರಾಣಿಗಳನ್ನು ಈ ಭೂಮಿಯ ಪಾಲುದಾರನ್ನಾಗಿ ನೋಡಿದರು. ಅವರ ಅಹಿಂಸೆಯ ಪರಿಕಲ್ಪನೆಯೇ ಸತ್ಯ. ಚಳವಳಿಗಳಿಗೆ ಹೊಸ ಕಲ್ಪನೆ ನೀಡಿದವರು ಮಹಾತ್ಮಾ ಗಾಂಧಿ.
ಸತ್ಯಾಗ್ರಹ:
“ಸತ್ಯಾಗ್ರಹ” ಇದು ಸಂಸ್ಕೃತ ಪದಗಳಾದ ಸತ್ಯ (ಸತ್ಯ) ಮತ್ತು ಆಗ್ರಹ (ವಶಪಡಿಸಿಕೊಳ್ಳುವುದು ಅಥವಾ ಹಿಡಿದಿಟ್ಟುಕೊಳ್ಳುವುದು) ನಿಂದ ಬಂದಿದೆ. ಸತ್ಯಾಗ್ರಹವನ್ನು ನಡೆಸುವವರು ತಮ್ಮನ್ನು ತಾವು ಹೆಚ್ಚು ನೈತಿಕ, ದೈವಿಕ ಬಲಗಳೊಂದಿಗೆ ಜೋಡಿಸಿಕೊಂಡಿರುತ್ತಾರೆ ಎಂದು ಗಾಂಧಿ ನಂಬಿದ್ದರು. ಆದ್ದರಿಂದ ಇದು ಆತ್ಮ ಶಕ್ತಿಯ ಒಂದು ರೂಪವಾಗಿದೆ. 1908ರ ಲೇಖನವೊಂದರಲ್ಲಿ, ಸತ್ಯಾಗ್ರಹಿ (ಸತ್ಯಾಗ್ರಹದ ಅಭ್ಯಾಸ ಮಾಡುವವನು) ತನ್ನ ಮನಸ್ಸಿನ ಭಯವನ್ನು ತೊಡೆದುಹಾಕುತ್ತಾನೆ ಮತ್ತು ಇತರರಿಗೆ ಗುಲಾಮನಾಗಲು ನಿರಾಕರಿಸುತ್ತಾನೆ ಎಂದು ಗಾಂಧೀಜಿ ಹೇಳಿದ್ದಾರೆ.
ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಕಾರಣವಾದ ಪ್ರತಿಭಟನೆಗಳು:
1. ಬ್ಲಾಕ್ ಲೈವ್ಸ್ ಮ್ಯಾಟರ್:2020ರ ಕೆಲವು ಹೋರಾಟಗಳು 1919, 1943 ಮತ್ತು 1968ರ ಹೋರಾಟಗಳಿಗೆ ಹೋಲಿಕೆಯಾಗುತ್ತವೆ. ಫ್ಲಾಯ್ಡ್ ಸೇರಿದಂತೆ ವರ್ಷಕ್ಕೆ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡ ಆಫ್ರಿಕನ್ನರ ಅಮೆರಿಕ ವಿರುದ್ಧದ ಹೋರಾಟ, ಕರಿಯರ ವಿರುದ್ಧದ ಹಿಂಸಾಚಾರ ಮತ್ತು ಪೊಲೀಸ್ ದೌರ್ಜನ್ಯ ವಿರುದ್ಧದ ಹೋರಾಟಗಳು ಇದಕ್ಕೆ ಹೊಲಿಕೆಯಾಗುತ್ತವೆ. ಬ್ರೀನಾ ಟೇಲರ್, ಅಹ್ಮದ್ ಅರ್ಬೆರಿ ಹೋರಾಟದಲ್ಲಿ ಇತ್ತೀಚೆಗೆ ಬಲಿಪಶುಗಳಾದ ವ್ಯಕ್ತಿಗಳು. 2020ರ ಹೆಚ್ಚಿನ ಪ್ರತಿಭಟನೆಗಳು ಶಾಂತಿಯುತವಾಗಿವೆ.
ಯುನೈಟೆಡ್ ಸ್ಟೇಟ್ಸ್ ಅನ್ನು ಮುನ್ನಡೆಸಿದ ಸುಮಾರು 93 ಪ್ರತಿಶತದಷ್ಟು ಜನಾಂಗೀಯ-ನ್ಯಾಯ ಪ್ರತಿಭಟನೆಗಳು ಶಾಂತಿಯುತ ಮತ್ತು ಅಪ್ರಸ್ತುತವಾಗಿಯೇ ಉಳಿದಿವೆ. ಮೇ ತಿಂಗಳಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಸಂಬಂಧಿಸಿದಂತೆ ಮೇ.26 ರಿಂದ ಆಗಸ್ಟ್ 22 ರವರೆಗೆ 7,750 ಪ್ರತಿಭಟನೆಗಳು ನಡೆದಿವೆ. ಎಲ್ಲ 50 ರಾಜ್ಯಗಳು ಮತ್ತು ಜಿಲ್ಲೆಯಾದ್ಯಂತ 2,400 ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದವು.
2. ಉಪ್ಪಿನ ಸತ್ಯಾಗ್ರಹ:ಭಾರತದಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ಸುಂಕವನ್ನು ಹಾಕಿದಾಗ, ಗಾಂಧೀಜಿಯವರು ಇದನ್ನು ಖಂಡಿಸಿ 1930 ಮಾರ್ಚ್ 12ರಂದು ಸಾಬರಮತಿ ಆಶ್ರಮದಿಂದ ದಂಡಿಯಾತ್ರೆಯನ್ನು ಆರಂಭಿಸಿದರು. 1930 ಏಪ್ರಿಲ್ 16ರಂದು ದಂಡಿಯನ್ನು ತಲುಪಿ ಉಪ್ಪನ್ನು ತಯಾರಿಸಿ ಕಾನೂನನ್ನು ಉಲ್ಲಂಘಿಸಿದರು. ಯಾವುದೇ ಭಾರತೀಯರು ದೇಶದಲ್ಲಿ ಉಪ್ಪು ಸಂಗ್ರಹಿಸಲು ಅಥವಾ ಮಾರಾಟ ಮಾರಾಟ ಮಾಡಬಾರದು ಎಂದು ಬ್ರಿಟೀಷರು ಆದೇಶಿಸಿದ್ದರು.
3. ಮತದಾನದ ಹಕ್ಕಿಗಾಗಿ ಮೆರವಣಿಗೆ:ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಅವಕಾಶ ಮತ್ತು ಹಕ್ಕನ್ನು ನೀಡಬೇಕು ಎಂದು 1913ರ ಸಫ್ರಿಜ್ ಪೆರೇಡ್ ನಂತಹ ಶಾಂತಿಯುತ ಪ್ರತಿಭಟನೆಯನ್ನು ಸುಮಾರು 5,000ಕ್ಕೂ ಹೆಚ್ಚು ಮಹಿಳೆಯರು ನಡೆಸಿದರು. ಈ ಪ್ರತಿಭಟನೆಯು ಶಾಂತಿಯುತವಾಗಿ ನಾವು ಏನನ್ನ ಬೇಕಾದರೂ ಬದಲಾಯಿಸಬಹುದೆಂದು ತೋರಿಸಿ ಕೊಟ್ಟಿದೆ.
4. ಡೆಲಾನೊ ಗ್ರೇಪ್ ಬಹಿಷ್ಕಾರ:ಸೀಸರ್ ಚಾವೇಜ್ ಅವರ ಈ ಶಾಂತಿಯುತ ಪ್ರತಿಭಟನೆಯೂ ಸುಮಾರು 25 ದಿನಗಳ ಕಾಲ ನಡೆಯಿತು. ಇದನ್ನು 1960 ರ ದಶಕದ ಉತ್ತರಾರ್ಧದಲ್ಲಿ ಅಮೆರಿಕದ ಕೃಷಿ ಕಾರ್ಮಿಕರ ಶೋಷಣೆಯನ್ನು ಕೊನೆಗೊಳಿಸುವ ಸಲುವಾಗಿ ಶಾಸಕಾಂಗ ಬದಲಾವಣೆಗಳನ್ನು ತರಲು ನಡೆಸಲಾಯಿತು. ಕ್ಯಾಲಿಫೋರ್ನಿಯಾದ ಡೆಲಾನೊದಲ್ಲಿ ಐದು ವರ್ಷಗಳ ಮುಷ್ಕರವನ್ನು ಅವರು ಮುನ್ನಡೆಸಿದರು. ಪ್ರಾಥಮಿಕವಾಗಿ ಕಡಿಮೆ ವೇತನ ಪಡೆಯುವ ಫಿಲಿಪಿನೋ ಕೃಷಿ ಕೆಲಸಗಾರರಿಗೆ ಕನಿಷ್ಠ ವೇತನವನ್ನು ಕೋರಲು 2,000 ರೈತರನ್ನು ಒಟ್ಟುಗೂಡಿಸಿದರು. ಇದು 17 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಕ್ಯಾಲಿಫೋರ್ನಿಯಾ ದ್ರಾಕ್ಷಿಯನ್ನು ಬಹಿಷ್ಕರಿಸಲು ಕಾರಣವಾಯಿತು.
5. ಮಾಂಟ್ಗೊಮೆರಿ ಬಸ್ ಬಹಿಷ್ಕಾರ:ಈ ಪ್ರತಿಭಟನೆಯನ್ನು ನಾಗರಿಕ ಹಕ್ಕುಗಳನ್ನು ಪಡೆಯುವ ಸಲುವಾಗಿ ನಡೆಸಲಾಯಿತು. ಮಾಂಟ್ಗೊಮೆರಿಯಲ್ಲಿ ರೋಸಾ ಪಾರ್ಕ್ಸ್ ಎಂಬುವರು ತಮ್ಮ ಸೀಟನ್ನು ಬಿಳಿಯ ವ್ಯಕ್ತಿಗೆ ಬಿಟ್ಟುಕೊಡಲು ನಿರಾಕರಿಸಿದರು. ಅವರ ಈ ಧಿಕ್ಕಾರದ ಪ್ರತಿಭಟನೆಯೂ ನಾಗರಿಕ ಹಕ್ಕುಗಳನ್ನು ಪಡೆಯಲು ಕಾರಣವಾಯಿತು. ಬಸ್ನಲ್ಲಿ ಸಂಚರಿಸುವ ಎಲ್ಲರಿಗೂ ಎಲ್ಲಾ ಸೀಟ್ಗಳಲ್ಲಿ ಕುಳಿತುಕೊಳ್ಳುವ ಹಕ್ಕಿದೆ ಎಂಬ ಸಂದೇಶವನ್ನು ಈ ಪ್ರತಿಭಟನೆ ಸಾರಿತು. ಯು.ಎಸ್. ಸುಪ್ರೀಂಕೋರ್ಟ್ ಒಂದು ವರ್ಷದ ನಂತರ 1956 ರಲ್ಲಿ ಸಾರ್ವಜನಿಕ ಬಸ್ಗಳಲ್ಲಿ ಪ್ರತ್ಯೇಕಿಸುವುದು ಅಸಂವಿಧಾನಿಕ ಎಂದು ತೀರ್ಪು ನೀಡಿತು.
6. ಸಿಂಗಿಂಗ್ ಕ್ರಾಂತಿ:ಸಿಂಗಿಂಗ್ ಕ್ರಾಂತಿಯ ಸಮಯದಲ್ಲಿ, ಎಸ್ಟೋನಿಯಾ ಅಕ್ಷರಶಃ ಸೋವಿಯತ್ ಒಕ್ಕೂಟದ ಆಳ್ವಿಕೆಯಿಂದ ಹೊರಬಂದಿತು. 1988ರಲ್ಲಿ ಸೋವಿಯತ್ ಆಡಳಿತವನ್ನು ವಿರೋಧಿಸಿ 100,000ಕ್ಕೂ ಹೆಚ್ಚು ಎಸ್ಟೋನಿಯನ್ನರು ಐದು ರಾತ್ರಿ ಪ್ರತಿಭಟಿಸಿದರು. ಇದನ್ನು ಹಾಡುವ ಕ್ರಾಂತಿ ಎಂದು ಕರೆಯಲಾಗುತದೆ. 1991 ರಲ್ಲಿ, ದಶಕಗಳ ಸೋವಿಯತ್ ಆಳ್ವಿಕೆಯ ನಂತರ ಕೇವಲ 1.5 ಮಿಲಿಯನ್ ಜನರನ್ನು ಹೊಂದಿರುವ ದೇಶವು ಸ್ವಾತಂತ್ರ್ಯವನ್ನು ಮರಳಿ ಪಡೆಯಿತು.
ಸತ್ಯ, ಅಹಿಂಸೆ ಮತ್ತು ಶಾಂತಿಯನ್ನು ಅಸ್ತ್ರವಾಗಿ ಬಳಸಿಕೊಂಡು ಹೋರಾಟ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅತಿ ಮುಖ್ಯ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿಯವರ 151ನೇ ಜನ್ಮ ದಿನವಿದು. ಇವರ ಜನ್ಮ ದಿನವನ್ನ ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ ಎನ್ನುವುದು ಹೆಮ್ಮೆಯ ವಿಚಾರ. ಅವರನ್ನು ಒಂದು ವ್ಯಕ್ತಿಯ ರೂಪದಲ್ಲಿ ನೋಡದೇ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಅವರ ಆದರ್ಶಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ಅತಿ ದೊಡ್ಡ ಕೃತಜ್ಞತೆಯಾಗಲಿದೆ.